Advertisement
2019ರ ಅ.15ರಂದು ಸುರಿದ ಭಾರಿ ಮಳೆಗೆ ರಸ್ತೆ ಸಹಿತ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ರಸ್ತೆ ಕುಸಿತಗೊಂಡ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಇಲಾಖಾಧಿಕಾರಿಗಳು ಕೂಡಲೇ ಸೇತುವೆಯನ್ನು ನಿರ್ಮಿಸುವ ಭರವಸೆ ನೀಡಿದ್ದರು. ಒಂದು ತಿಂಗಳ ಅನಂತರ ಇನ್ನೊಂದು ಬದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿದ್ದು, ತಾತ್ಕಾಲಿಕ ರಸ್ತೆಯಲ್ಲಿ ವಾಹನ ಸಂಚಾರ ಅಪಾಯದ ಸ್ಥಿತಿಯಲ್ಲಿದೆ. ಇನ್ನು ಒಂದು ಮಳೆ ಬಂದರೂ ತಾತ್ಕಾಲಿಕ ರಸ್ತೆ ಬಂದ್ ಆಗಲಿದೆ. ಅಧಿಕಾರಿಗಳನ್ನು ಕೇಳಿದರೆ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಈ ಭಾಗದ ಸ್ಥಳೀಯರು ಹೇಳುತ್ತಾರೆ.
ಕುಸಿತಗೊಂಡ ರಸ್ತೆ ಪಕ್ಕದಲ್ಲಿರುವ ಕೃಷಿ ಜಮೀನಿಗೆ ಕಲ್ಲು ಮಣ್ಣು ತುಂಬಿ ಫಲ ವತ್ತಾದ ಬೆಳೆ ನಾಶವಾಗಿದೆ. ಇನ್ನು ಮುಂದೆ ಕೃಷಿ ಮಾಡಬೇಕಾದರೆ ಗದ್ದೆಗೆ ಬಿದ್ದಿರುವ ಕಲ್ಲು ಮಣ್ಣುಗಳನ್ನು ತೆಗೆಯಬೇಕು. ಅದೇ ಗದ್ದೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದ್ದು, ಈ ಭಾಗದ ಕೃಷಿಕರು ಆಕ್ರೋಶಗೊಂಡಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಮತ್ತೆ ಮಳೆ ಪ್ರಾರಂಭವಾದರೆ ಮತ್ತೆ ಕಾಮಗಾರಿ ಮಾಡುವುದು ಕಷ್ಟ. ಇದರಿಂದ ಈ ಭಾಗದ ಸಂಪರ್ಕ ಕಡಿತಗೊಳ್ಳುವ ಭೀತಿ ಸ್ಥಳೀಯರಲ್ಲಿ ಮನೆಮಾಡಿದೆ. ಈ ಬಗ್ಗೆ ಕೂಡಲೇ ಜನಪ್ರತಿನಿಧಿಗಳು ಇಲಾಖೆ ಗಮನಹರಿಸಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಜನರೆಲ್ಲ ಒಟ್ಟಾಗಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
Related Articles
ಬೈರಂಪಳ್ಳಿ, ಕಂಚಿಗುಂಡಿಯ ಸೇತುವೆ ನಿರ್ಮಾಣ ಕಾರ್ಯ ಡಿಸೆಂಬರ್ ತಿಂಗಳಿನ ಮೊದಲ ವಾರದಲ್ಲಿ ಆರಂಭಿಸುವುದಾಗಿ ತಿಳಿಸಿದ್ದಾರೆ. ಆದರೆ ಜನವರಿ ತಿಂಗಳು ಬಂದರೂ ಕಾಮಗಾರಿ ನಡೆಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಪ್ರಕೃತಿ ವಿಕೋಪ ಪರಿಹಾರದ ಹಣವನ್ನು ಅಗತ್ಯವಿಲ್ಲದ ಸ್ಥಳಗಳಿಗೆ ಬಳಸಿ ತೀರ ಅಗತ್ಯವಿರುವ ಕಂಚಿಗುಂಡಿ ರಸ್ತೆಯನ್ನು ನಿರ್ಲಕ್ಷಿಸಲಾಗಿದ್ದು, ಅನುದಾನದ ದುರುಪಯೋಗ ನಡೆದಿದೆ. ಶೀಘ್ರ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು.
-ಶ್ರೀಧರ್ ಶೆಟ್ಟಿ ಕುತ್ಯಾರುಬೀಡು, ಸ್ಥಳೀಯರು
Advertisement
ಡಿಸಿಗೆ ಮನವಿಈ ಭಾಗದ ಸಮಸ್ಯೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದೂ ಪ್ರಯೋಜನವಾಗದೆ ಗ್ರಾಮ ಪಂಚಾಯತ್‌ನಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಸ್ಥಳಕ್ಕೆ ಭೆೇಟಿ ನೀಡಿ ಅಧಿಕಾರಿಗಳು ಶೀಘ್ರ ಕಾಮಗಾರಿ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಇನ್ನೂ ಯಾವುದೇ ಕೆಲಸ ಆರಂಭವಾಗಿಲ್ಲ. ಈ ಭಾಗದಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
-ಸದಾಶಿವ ಪೂಜಾರಿ, ಅಧ್ಯಕ್ಷರು,
ಗ್ರಾಮ ಪಂಚಾಯತ್ ಬೈರಂಪಳ್ಳಿ ಶೀಘ್ರ ಕಾಮಗಾರಿ
ಸರಕಾರ ಅನುದಾನ ಬಿಡುಗಡೆಯಾದ ಅನಂತರ ಕಾಮಗಾರಿ ಕೈಗೊಳ್ಳಿ ಎಂಬ ಮಾಹಿತಿ ಮೇಲೆ ತಡವಾಗಿದೆ. ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು ಇನ್ನು 10 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.
-ಅಶೋಕ್,ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ