ನಾಗ್ಪುರ: ಜನರ ಸಮಸ್ಯೆಗಳನ್ನು ಕ್ಲಪ್ತ ಸಮಯಕ್ಕೆ ಅವರನ್ನು ಸತಾಯಿಸದೇ ಮಾಡಿಕೊಡದೇ ಹೋದಲ್ಲಿ ಅವರ ಸಿಟ್ಟನ್ನು ಎದುರಿಸಲು ಸಿದ್ಧರಾಗಿರಿ ಎಂದು ಕೇಂದ್ರ ಸಾರಿಗೆ ಮತ್ತು ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಲೋಕಸಭಾ ಕ್ಷೇತ್ರದ ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ಉಲ್ಲೇಖಿಸಿದ ಸಚಿವ ಗಡ್ಕರಿ ಅವರು ನೀವೆಲ್ಲರೂ ಸರಕಾದ ನೌಕರರು ಎನ್ನುವುದನ್ನು ಮರೆಯಬೇಡಿ ಮತ್ತು ನೀವು ಮಾಡುವ ಇಂತಹ ಭ್ರಷ್ಟಾಚಾರ ಕೆಲಸಗಳಿಗೆ ನಾನು ಜನರಿಗೆ ಉತ್ತರ ಕೊಡಬೇಕಾಗುತ್ತದೆ ಎಂದು ಕಿಡಿಕಾರಿದರು.
ಜನರ ಕೆಲಸ ಮಾಡಿಕೊಡುವ ವಿಚಾರದಲ್ಲಿ ನೀವು ಹೀಗೆಯೇ ಅವರನ್ನು ಸತಾಯಿಸುತ್ತಿದ್ದರೆ ನಿಮ್ಮ ಜನ್ಮ ಜಾಲಾಡುವಂತೆ (ದುಲಾಯಿ ಕರೋ) ನಾನೇ ಜನರಿಗೆ ಕರೆ ಕೊಡುತ್ತೇನೆ ಎಂದೂ ಸಹ ಸಚಿವ ಗಡ್ಕರಿ ಅವರು ಇದೇ ಸಂದರ್ಭದಲ್ಲಿ ಗಂಭೀರವಾದ ಎಚ್ಚರಿಕೆಯನ್ನು ಅಧಿಕಾರಿ ವರ್ಗಕ್ಕೆ ನೀಡಿದರು.
‘ಯಾಕೆ ನಮ್ಮಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ? ಯಾಕೆ ಈ ಇನ್ ಸ್ಪೆಕ್ಟರ್ ಗಳು ಲಂಚ ತೆಗೆದುಕೊಳ್ಳುತ್ತಾರೆ? ಇವತ್ತು ನಾನು ನಿಮ್ಮ ಎದುರಲ್ಲೇ ಹೆಳುತ್ತಿದ್ದೇನೆ, ನೀವೆಲ್ಲಾ ಸರಕಾರಿ ನೌಕರರು, ನಾನು ಜನರಿಂದ ಆಯ್ಕೆಯಾದವನು. ನಾನು ಜನರಿಗೆ ಉತ್ತರ ನೀಡಬೇಕಾಗಿದೆ. ಒಂದುವೇಳೆ ನೀವು ಕಳ್ಳಕೆಲಸ ಮಾಡಿದರೆ ನಾನು ನಿಮ್ಮನ್ನು ‘ಕಳ್ಳ’ ಎಂದೇ ಕರೆಯುತ್ತೇನೆ’ ಎಂದು ಸಚಿವ ಗಡ್ಕರಿ ಅವರು ಗರಂ ಆದರು.