ಸಿದ್ದಾಪುರ: ಕೋವಿಡ್ ಹಿನ್ನಲೆಯಿಂದ ಕೆಲವು ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆದರೂ ಸಹ ಇತ್ತೀಚಿನ ದಿನಗಳಲ್ಲಿ ಆದ್ಯತೆಗಳ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಬೆಳ್ವೆ ತಾ.ಪಂ. ವ್ಯಾಪ್ತಿಯ ಗುಡ್ಡೆಯಂಗಡಿ- ಮಾಯಾ ಬಜಾರ್ ಸಂಪರ್ಕದ ಕುಂಟುಹೊಳೆ ಸೇತುವೆ 2.6 ಕೋ. ರೂ. ಮತ್ತು 4.97 ಕೋ. ರೂ. ವೆಚ್ಚದಲ್ಲಿ ಬಡಾಬೆಪ್ಡೆ- ಗುಡ್ಡೆಯಂಗಡಿಯಿಂದ ಮಾಯಾಬಜಾರ್ ಸಂಪರ್ಕದ ಕುಂಟುಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕಕ್ಕೆ ಕಳೆದ ಏಳೆಂಟು ವರ್ಷ ಗಳಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಹೆಚ್ಚಿನ ಅನುದಾನ ಸಿಕ್ಕಿರಲಿಲ್ಲ, ಹಲವು ಬಾರಿ ಮನವಿಗಳನ್ನು ಸಲ್ಲಿಸಿದ ಬಳಿಕ ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ 550 ಕೋ. ರೂ. ಹಣ ಬಿಡುಗಡೆಯಾಗಿದೆ. ಚಿಕ್ಕಮಗಳೂರು, ಉಡುಪಿ ಸೇರಿದಂತೆ ಮಲೆನಾಡು ಭಾಗಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳ ಆವಶ್ಯಕತೆಯಿದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ವೆಂಟಿಲೇಟರ್ ಸಹಿತ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದರು.
ಈ ಸಂದರ್ಭ ನೂತನವಾಗಿ ಅಸ್ತಿತ್ವಕ್ಕೆ ಬಂದ ಹೆಬ್ರಿ ತಾ.ಪಂ.ಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಮೇಶ ಪೂಜಾರಿ ಶಿವಪುರ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್. ಚಂದ್ರಶೇಖರ್ ಶೆಟ್ಟಿ ಸೂರೊಳಿ ಅವರನ್ನು ಸಮ್ಮಾನಿಸಲಾಯಿತು.
ಜಿ.ಪಂ. ಸದಸ್ಯೆ ಸುಪ್ರೀತಾ ಉದಯ ಕುಲಾಲ್, ಕುಂದಾಪುರ ತಾ. ಪಂ. ಮಾಜಿ ಅಧ್ಯಕ್ಷೆ ದೀಪಿಕಾ ಎಸ್.ಶೆಟ್ಟಿ, ಮಾಜಿ ಸದಸ್ಯ ಎಂ. ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ಮಡಾಮಕ್ಕಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ರತಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಜೀವ ಕುಲಾಲ, ಉಪಾಧ್ಯಕ್ಷೆ ಜ್ಯೋತಿ ಸೀತಾರಾಮ ಪೂಜಾರಿ, ಮಾಜಿ ಸದಸ್ಯರಾದ ಸದಾನಂದ ಪೂಜಾರಿ, ಸುಬ್ಬಣ್ಣ ಶೆಟ್ಟಿ, ಮೇರಿ ಸಾಜನ್, ರೇಖಾ, ಸತೀಶ್‌ಕುಮಾರ್ ಶೆಟ್ಟಿ, ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ್ ಶೆಟ್ಟಿ, ಅರ್ಚಕ ನಾಗರಾಜ ಬಾಯರಿ, ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಕುಂದಾಪುರ ಪುರಸಭೆ ಸದಸ್ಯ ಸಂತೋಷ ಶೆಟ್ಟಿ ಉಪಸ್ಥಿತರಿದ್ದರು.