Advertisement

ಸಾಧು-ಸಂತರ ಮಾರ್ಗದರ್ಶನದಲ್ಲೇ ಕಾರ್ಯ

04:48 PM May 22, 2018 | |

ಶಿವಮೊಗ್ಗ: ಸಮಾಜ ಸನ್ಮಾರ್ಗದಲ್ಲಿ ನಡೆಯಲು ಸಾಧು ಸಂತರ ಮಾರ್ಗದರ್ಶನ ಅತಿಮುಖ್ಯ. ಹಾಗೆಯೇ ಸಮಾಜ ಸೇವೆ ಹಾಗೂ ನಿಸ್ವಾರ್ಥ ಭಾವನೆ ಬೆಳೆಯಲು ಸಂಸ್ಕಾರಯುತ ವಾತಾವರಣ ಬೇಕಾಗುತ್ತದೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಬಸವಕೇಂದ್ರದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಿಗೂ ಸಂಸ್ಕಾರ ಮುಖ್ಯ. ಸಂಸ್ಕಾರ ಇಲ್ಲದ ವ್ಯಕ್ತಿ ಪಶುಗಳಿಗೆ ಸಮಾನವಾಗುತ್ತಾರೆ ಎಂದರು.

ಭಾರತದ ಕುರಿತು ವಿದೇಶಗಳಲ್ಲಿ ತಪ್ಪಾಗಿ ನೋಡುವ ಕಾಲವಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ವಿಶ್ವದ ಇತರೆ ರಾಷ್ಟ್ರಗಳು ಭಾರತವನ್ನು ಗೌರವಯುತವಾಗಿ ನೋಡುವಂತಾಗಿದೆ ಎಂದು ತಿಳಿಸಿದರು.

ಸಾಧು ಸಂತರ ಹಾಗೂ ಜನರ ಆಶೀರ್ವಾದ ಪರಿಣಾಮ ಶಿವಮೊಗ್ಗದ ಶಾಸಕನಾಗಿ ಆಯ್ಕೆ ಆಗಿರುವುದು ಸಂತಸ ತಂದಿದೆ. ಶಿವಮೊಗ್ಗದ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳ ಆಶೀರ್ವಾದ ಪಡೆದು ಪ್ರಚಾರ ಆರಂಭಿಸಿದ್ದೆ. 

ಮುಂದೆಯೂ ಸಾಧು ಸಂತರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು. ಬಸವಕೇಂದ್ರದಿಂದ ನಿರಂತರವಾಗಿ ಜನರಲ್ಲಿ ಸಂಸ್ಕಾರ ತುಂಬುವ ಕೆಲಸವಾಗುತ್ತಿರುವುದು ಶ್ಲಾಘನೀಯ. ಈ ರೀತಿಯ ಕಾರ್ಯಕ್ರಮಗಳು ಇಲ್ಲದೇ ಹೋದರೆ ಮನುಷ್ಯ ಪೂರ್ಣ ಸ್ವಾರ್ಥಿಯಾಗುತ್ತಾನೆ. ಹಾಗಾಗಿ ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ’ ಎಂದರು.

Advertisement

ನಿವೃತ್ತ ಪ್ರಾಧ್ಯಾಪಕಿ ಪ್ರೊ| ಕಿರಣ್‌ ದೇಸಾಯಿ “ಶರಣ ಪರಂಪರೆಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ’ ವಿಷಯ ಕುರಿತು ಮಾತನಾಡಿ, ಸಂಸ್ಕೃತಿ ರೂಪಿಸುವ ಹಾಗೂ ಮೌಲ್ವಿಕ ಬದುಕು ಕಟ್ಟಿಕೊಳ್ಳುವ ಪ್ರಭಾವ ಬೀರಿದವರು ಶರಣರು ಎಂದು ಹೇಳಿದರು.

ಆದರ್ಶ ಜೀವನ ನಡೆಸಿದ ಶರಣ ಪರಂಪರೆಯ ಕೊಡುಗೆ ವಿಶ್ವಕ್ಕೆ ನಿತ್ಯ ನಿರಂತರ ಆಗಿರುತ್ತದೆ. ವಚನ ಸಾಹಿತ್ಯ ಕೂಡ ವಿಶೇಷವೆನಿಸುವುದು ಇಂತಹ ಸಂದೇಶಗಳಿಂದಲೇ. ಶಿವಮೊಗ್ಗ ಜಿಲ್ಲೆಗೂ ಶರಣ ಪರಂಪರೆಗೂ ಅವಿನಾಭಾವ ಕೊಡುಗೆಯಿದೆ. ಅದರಲ್ಲಿಯೂ ಶಿಕಾರಿಪುರ ಶರಣ ಪರಂಪರೆ ಪುಟಗಳಲ್ಲಿ ವಿದ್ವತ್ತಿನ ಆಗರವಾಗಿ ಕಾಣುತ್ತದೆ. ಉಡುತಡಿ, ಬಳ್ಳಿಗಾವಿ, ಹಿರೇಜಂಬೂರು, ಶಿವನಪಾದ ಸೇರಿದಂತೆ ಶಿಕಾರಿಪುರ, ಶಿವಮೊಗ್ಗದಲ್ಲಿ 26ಕ್ಕೂ ಹೆಚ್ಚು ಶರಣರನ್ನು ಗುರುತಿಸುತ್ತೇವೆ ಎಂದರು.

ಅಲ್ಲಮ, ಅಕ್ಕ ಮಹಾದೇವಿ, ಸತ್ಯಕ್ಕ ಅವರಂತಹ ಶರಣ ಶರಣೆಯರು ಶಿವಮೊಗ್ಗದವರಾಗಿದ್ದಾರೆ. ಅಲ್ಲಮ ವಿಶ್ವ ದಾರ್ಶನಿಕ ಮಟ್ಟದ ಶರಣ. ಆತನ ವಚನಗಳು ಅರಿತುಕೊಳ್ಳುವುದು ಹಾಗೂ ಅನುವಾದಿಸುವುದು ಕಷ್ಟಕರ. ಶರಣರ ಜೀವನ ಅಧ್ಯಯನ ನಡೆಸಬೇಕು. ಅಂತರಂಗದ ಅರಿವು ಬೆಳೆಸಿಕೊಳ್ಳಲು ಶರಣರ ಸಂದೇಶಗಳು ಮುಖ್ಯ ಎಂದು ಹೇಳಿದರು. 

ಶಾಸಕ ಕೆ.ಎಸ್‌. ಈಶ್ವರಪ್ಪ, ಉದ್ಯಮಿ ಎಸ್‌. ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರನ್ನು ಅಭಿನಂದಿಸಲಾಯಿತು. ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಓಂಕಾರಪ್ಪ ಸ್ವಾಗತಿಸಿದರು. ಬಾರಂದೂರು ಪ್ರಕಾಶ್‌ ನಿರೂಪಿಸಿದರು. ಅಕ್ಕನ ಬಳಗದ ಸದಸ್ಯೆಯರು ವಚನ ಗಾಯನ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next