ಹುಮನಾಬಾದ: ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ವರ್ತಕರು ಎಪಿಎಂಸಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸೂಕ್ತ ತೆರಿಗೆ ಪಾವತಿಸುವ ಮೂಲಕ ಮಾತ್ರ ಕಚೇರಿ ಉಳಿಸಿಕೊಳ್ಳಬೇಕು. ಕಚೇರಿ ಬಂದ್ ಆದರೆ, ಇಡೀ ಎಪಿಎಂಸಿಗೆ ಬೀಗ ಬೀಳುತ್ತದೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
ಎಪಿಎಂಸಿ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮ ವಹಿಸಿದ್ದೇನೆ. ಹಳೇ ನಕ್ಷೆ ಬದಲಿಸಿ ಹೊಸ ನಕ್ಷೆ ರೂಪಿಸಿಕೊಂಡು ನಿವೇಶನ ವರ್ಗಾವಣೆ ಮಾಡಲಾಗಿದ್ದು, ಹಳೇ ನಕ್ಷೆ ಪ್ರಕಾರ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಪಟ್ಟಣದಲ್ಲಿನ ಸಹಕಾರ ಸಂಘದಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಇದೀಗ ಕಲಂ 64ರ ಅಡಿಯಲ್ಲಿ ತನಿಖೆ ನಡೆಸುತ್ತಿರುವುದಾಗಿ ಸಹಕಾರ ಸಂಘದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಪ್ರಾಣಗಣದಲ್ಲಿ ವರ್ತಕರು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಾಂಗಣದಲ್ಲಿ ಎಲ್ಲ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಅನುದಾನದ ಸಮಸ್ಯೆ ಇದ್ದರೆ ಬೇರೆ ಅನುದಾನದಲ್ಲಿ ಸೌಲಭ್ಯ ಒದಗಿಸಲಾಗುವುದು. ಮುಂದಿನ 15 ದಿನಗಳಲ್ಲಿ ಯಾವುದೇ ಸಮಸ್ಯೆ ಕಂಡು ಬರದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.
ಎಪಿಎಂಸಿ ಕಾರ್ಯದರ್ಶಿ ತುಳಸಿರಾಮ ಲಾಖೆ, ಸಭೆಯಲ್ಲಿ ಅನುದಾನದ ವಿವರಣೆ ನೀಡಿದರು. ಈ ವೇಳೆ ಅನೇಕ ವ್ಯಾಪಾರಸ್ಥರು ಇದ್ದರು.