Advertisement

ಶ್ರಮವೇ ಸಾಧನೆಯ ಗುಟ್ಟು

10:14 PM Jul 14, 2019 | Sriram |

ಯೋಗ ಮತ್ತು ಯೋಗ್ಯತೆ‌ಗಳೆರಡೂ ವ್ಯಕ್ತಿಯೊಬ್ಬನನ್ನು ಔನ್ನತ್ಯಕ್ಕೆ ಏರಿಸುವ ಅಥವಾ ಪ್ರಪಾತಕ್ಕೆ ದೂಡುವ ಕೆಲಸವನ್ನು ಮಾಡಿ ಬಿಡುತ್ತದೆ. ಹೆಚ್ಚಿನ ಸಂದರ್ಭ ಗಳಲ್ಲಿ ನಮ್ಮ ನಿರ್ಧಾರಗಳು, ಆಲೋಚನಾ ಲಹರಿಗಳೇ ನಾವು ಸಾಗುವ, ಸಾಗಬೇಕಾದ ಹಾದಿಯನ್ನು ತೋರಿದರೆ, ಇನ್ನು ಕೆಲವು ಬಾರಿ ನಮ್ಮ ತಪ್ಪು ಆಲೋಚನಾ ಕ್ರಮದಿಂದ ಭವ್ಯ ಭವಿತವ್ಯದ ಯಾನಕ್ಕೆ ನಾವೇ ಮುಳ್ಳಾಗಿ ಬಿಡುತ್ತೇವೆ. ಇದು ಒಬ್ಬಿಬ್ಬರ ಬದುಕಲ್ಲಿ ಮಾತ್ರವಲ್ಲ , ಬದಲಾಗಿ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಇರುವ ಗೊಂದಲದ ಮುಖವೇ ಹೌದು. ಇದನ್ನು ಪರಿಹರಿಸಿಕೊಳ್ಳುವ ಕೆಲವು ಪರಿಹಾರಗಳನ್ನು ನಾವಿಲ್ಲಿ ನೋಡೋಣ.

Advertisement

ಆಪ್ತರೊಂದಿಗೆ ಚರ್ಚೆ
ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬೇಕಾದರೆ ಈ ಅಂಶ ಮುಖ್ಯ. ಇತರರ ಸಲಹೆ ಸೂಚನೆಗಳು, ಒಳಿತು ಕೆಡುಕುಗಳ ಬಗೆಗಿನ ಒಂದು ಸಣ್ಣ ಸಮಾಲೋಚನೆ ಯಾವುದೇ ಕೆಲಸದ ಮೇಲೆ ನಾವಿಟ್ಟಿರುವ ಸಂಶಯಗಳನ್ನು ನಿವಾರಿಸುವಲ್ಲಿಯೂ ಕೆಲಸ ಮಾಡಬಲ್ಲದು. ಜತೆಗೆ ನಮ್ಮಲ್ಲಿ ಅಂದುಕೊಂಡ ದಾರಿಯಲ್ಲಿ ಹೆಚ್ಚು ಸಮರ್ಥವಾಗಿ ಸಾಗುವಲ್ಲಿಯೂ ಸಹಾಯ ಮಾಡುತ್ತದೆ.

ಶ್ರಮವೇ ಸಾಧನೆಯ ಗುಟ್ಟು
ಮಾಡುವ ಕೆಲಸವನ್ನು ಪ್ರೀತಿಯಿಂದ, ಪ್ರಾಮಾಣಿಕವಾಗಿ ಶ್ರಮ ವಹಿಸಿ ಮಾಡಿದಲ್ಲಿ ನಮಗೆ ಪರಿಪೂರ್ಣತೆ ಲಭ್ಯವಾಗುವುದು ಸಾಧ್ಯ. ಜತೆಗೆ ಆತ್ಮಾನಂದವನ್ನು ಪಡೆಯುವುದಕ್ಕೂ ಇದು ಕಾರಣವಾಗುತ್ತದೆ. ಮನಸ್ಸು ಪ್ರಫ‌ುಲ್ಲವಾಗಿದ್ದರೆ ಮಾತ್ರ ಶ್ರದ್ಧೆ ಹುಟ್ಟುವುದು ಸಾಧ್ಯ.

ನಾವು ಮನುಷ್ಯನನ್ನು ಅಳೆಯುವುದು ಅವನ ಸಂಪತ್ತು, ಸೌಂದರ್ಯದ ಮೂಲಕ. ವ್ಯಕ್ತಿಯ ಗುಣ, ಅವನ ಹಿತಾಸಕ್ತಿಗಳು, ಅವನ ಶಕ್ತಿಯ ಕುರಿತಾದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವವರು ನಮ್ಮಲ್ಲಿ ವಿರಳಾತಿವಿರಳ ಎನ್ನಬಹುದೇನೋ. ದುಡ್ಡಿಧ್ದೋನೇ ದೊಡ್ಡಪ್ಪ ಅನ್ನುವ ಕಾಲಘಟ್ಟದ ಜೀವನದಲ್ಲಿ ನಮಗೆ ನಾವು ಮನುಷ್ಯರಾಗಿ ಹೇಗೆ ಬದುಕುವುದು, ಮನುಷ್ಯತ್ವ ಹೇಗೆ ರೂಢಿಸಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳುವಲ್ಲಿ ವಿಫ‌ಲರಾಗುತ್ತಿರುವುದು ದುರಂತ. ಈ ವಿದ್ಯೆಯನ್ನು ನಮಗೆ ಯಾವ ಶಾಲಾ ಕಾಲೇಜುಗಳೂ ಹೇಳಿಕೊಡುವುದಿಲ್ಲ. ಮನೆಯೇ ಮೊದಲ ಪಾಠಶಾಲೆ ಎನ್ನುವ ನಾವು ಅಲ್ಲಿಂದಲೂ ಮನಸ್ಸಿನ ಶ್ರೀಮಂತಿಕೆಯ ಕ್ಷಣವನ್ನು ಪಡೆದುಕೊಳ್ಳುವಲ್ಲಿ ಸೋಲುತ್ತಿದ್ದೇವೆ. ನಾವು ಅರ್ಥ ಮಾಡಿಕೊಳ್ಳಬೇಕಾದ ಅನಂತ ಸತ್ಯವೆಂದರೆ ಸಾಧಿಸುವ ಮುನ್ನ ನಮ್ಮನ್ನು ಹುಚ್ಚರಂತೆ ಕಂಡವರೂ, ಗುರಿ ತಲುಪಿದ ಮೇಲೆ ಶಹಬ್ಟಾಸ್‌ ಎನ್ನುತ್ತಾರೆ ಎಂಬುದನ್ನು ಅರ್ಥ ಮಡಿಕೊಂಡಲ್ಲಿ ನಮ್ಮನ್ನು ಹಿಂದಿಕ್ಕುವವರನ್ನು ಹಿಂದಿಕ್ಕಿ ನಾವು ಮುಂದುವರಿಯುವುದು ಸಾಧ್ಯ.

ನೂರು ಬಾರಿ ಯೋಚಿಸಿ
ಜೀವನದ ಯಾವುದೇ ಮುಖ್ಯ ಘಟ್ಟಗಳತ್ತ ಹೆಜ್ಜೆ ಹಾಕುವಾಗ ಒಂದಷ್ಟು ಬಾರಿ ಸರಿ ತಪ್ಪುಗಳ ಕುರಿತು ಆಲೋಚನೆ ಮಾಡೋಣ. ಮಾಡಲು ಹೊರಟಿರುವ ಕಾರ್ಯದ ಮುಂದಿನ ಪರಿಣಾಮಗಳ ಬಗ್ಗೆಯೂ ಅವಲೋಕನಗಳನ್ನು ನಡೆಸುವ ಅಭ್ಯಾಸವನ್ನು ಕಲಿತುಕೊಂಡಲ್ಲಿ ನಿರೀಕ್ಷಿತ ಗುರಿಯತ್ತ ದಿಟ್ಟ ಹೆಜ್ಜೆಗಳನ್ನಿಡುವುದು ಸಾಧ್ಯವಾಗುತ್ತದೆ.

Advertisement

ಯಾರೇನೆಂದು ಕೊಳ್ಳುತ್ತಾರೋ ಎಂಬ ಭಯ ಬೇಡ
ನಮ್ಮ ಜೀವನ ನಮ್ಮದು. ಅವರೇನೆಂದುಕೊಳ್ಳುತ್ತಾರೆಯೋ, ಇವರೇನೆಂದುಕೊಳ್ಳುತ್ತಾರೆಯೋ ಎಂಬ ಭಯದಲ್ಲಿಯೇ ಉಳಿದುಬಿಟ್ಟರೆ ಸಾಧನೆ ಕನಸಿನ ನಕ್ಷತ್ರವಾಗಿ ಬಿಡುತ್ತದೆ. ನಡೆಯುವ ಹಾದಿಯಲ್ಲಿ ಮುಳ್ಳುಗಳಂತೆ ಅದೆಷ್ಟೋ ಮಂದಿ ಬಂದು ಹೋಗುವವರಿರುತ್ತಾರೆ. ಅದನ್ನೇ ಗಮನಿಸಿಕೊಂಡು ನಮ್ಮ ಗಮ್ಯದತ್ತ ಒಲವು ಕಡಿಮೆ ಮಾಡಿದೆವೆಂದಾದಲ್ಲಿ ಫ‌ಲ ನಮಗೆ ವಿರುದ್ಧವಾಗಿಯೇ ಬರುವುದು. ಹಾಗಾಗಿ ಹೇಳುವವರು ಹೇಳುತ್ತಲೇ ಇರಲಿ. ನಾವು ಮುಂದೆ ಸಾಗುವತ್ತ ದೃಷ್ಟಿ ನೆಡೋಣ ಅಲ್ಲವೇ.

-ಭುವನ ಬಾಬು, ಪುತ್ತೂರು


Advertisement

Udayavani is now on Telegram. Click here to join our channel and stay updated with the latest news.

Next