ಬಾಗಲಕೋಟೆ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಬಹು ವರ್ಷಗಳ ಬೇಡಿಕೆಯಾಗಿದ್ದು, ಈವರೆಗೆ ಕೇವಲ 33 ಕಿ.ಮೀ. ಕಾಮಗಾರಿ ನಿರ್ಮಾಣಗೊಂಡಿದೆ. ಭೂಸ್ವಾಧೀನ ವಿಳಂಬದಿಂದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರೈಲ್ವೆ ಸೌಲಭ್ಯಗಳ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಹೋರಾಟಗಾರರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಈ ಮಾರ್ಗ ಪೂರ್ಣಗೊಂಡಲ್ಲಿ ಇದೊಂದು ವಾಣಿಜ್ಯ ಕಾರಿಡಾರ್ ಆಗಿ ಪರಿವರ್ತನೆಯಾಗಲಿದೆ ಎಂದರು.
ಈ ಮಾರ್ಗ ಪೂರ್ಣಗೊಂಡರೆ ಈ ಭಾಗದ ಹಣ್ಣು, ಸಿಮೆಂಟ್, ಸಕ್ಕರೆ, ಸುಣ್ಣದ ಕಲ್ಲು ಮಹಾರಾಷ್ಟ್ರ ಮಾರುಕಟ್ಟೆಗೆ ಪೂರೈಸಲು ಅನುಕೂಲವಾಗಲಿದೆ. ಹೀಗಾಗಿ ಈ ಮಾರ್ಗ ಅತಿ ಬೇಗ ಪೂರ್ಣಗೊಳ್ಳಬೇಕಿದ್ದು, ಭೂಮಿ ಕೊಡಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಬಾಗಲಕೋಟೆ ರೈಲ್ವೆ ನಿಲ್ದಾಣದ ಗೂಡ್ಸ್ ಶೆಡ್‌ನ್ನು ಬೇರೆಡೆ ನಿಲ್ಲುವಂತೆ ಮಾಡಬೇಕು. ಇದರಿಂದ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಹಲವರಿಂದ ಮನವಿ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ, ಬಾಗಲಕೋಟೆ ಸೋಷಿಯಲ್ ವರ್ಕರ್ ಸೇರಿದಂತೆ ಜಿಲ್ಲೆಯ ಹಲವು ಹೋರಾಟಗಾರರು, ಬಾಗಲಕೋಟೆ-ಕುಡಚಿ ಹಾಗೂ ಗದಗ-ಹುಟಗಿ ರೈಲ್ವೆ ಮಾರ್ಗ ವ್ಯಾಪ್ತಿಯ ಹಳ್ಳಿಗಳ ರೈತರು ಸಚಿವ ಸರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಡಾ| ವೀರಣ್ಣ ಚರಂತಿಮಠ, ಪಿ. ರಾಜೀವ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕರಾದ ಪಿ.ಎಚ್. ಪೂಜಾರ, ನಾರಾಯಣಸಾ ಬಾಂಡಗೆ, ಪ್ರಕಾಶ ತಪಶೆಟ್ಟಿ, ಬಿಟಿಡಿಎ ಮಾಜಿ ಸದಸ್ಯ ಕುಮಾರ ಯಳ್ಳಿಗುತ್ತಿ, ಬಸಲಿಂಗಪ್ಪ ನಾವಲಗಿ, ರಾಜು ಮುದೇನೂರ, ರಾಜು ನಾಯ್ಕರ ಉಪಸ್ಥಿತರಿದ್ದರು.