ಪುಂಜಾಲಕಟ್ಟೆ :ಬಂಟ್ವಾಳ ತಾ| ಕುಕ್ಕಿಪಾಡಿ ಗ್ರಾ. ಪಂ. ನ 2016-17ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಗ್ರಾ.ಪಂ. ಸಭಾ ಭವನದಲ್ಲಿ ಜರಗಿತು.
ಪಂ. ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಭೆಯ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಸಭೆಯಲ್ಲಿ 2016-17ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ನಿರ್ವಹಿಸಿದ ಎಲ್ಲ ಕಾಮಗಾರಿಗಳನ್ನು ಹಾಜರಿದ್ದ ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೋಧನೆ ನಡೆಸಲಾಯಿತು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ಯೋಜನೆ ಕಾಯ್ದೆ ಪ್ರಕಾರ ನಿರ್ವಹಿಸಿ ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮಸ್ಥರ ಪರವಾಗಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ತಿಮ್ಮಪ್ಪ ಎನ್. ಪೂಜಾರಿ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿಬಂದಿ ಕೊರತೆ, ಯೋಜನೆಯ ತಾಂತ್ರಿಕದೋಷ, ಸರಿಯಾದ ಸಮಯಕ್ಕೆ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಲಿ ಮೊತ್ತ ಜಮೆಯಾಗದಿರುವುದು, ಕೂಲಿ ಕಾರ್ಮಿಕರು ಬ್ಯಾಂಕ್‌ಗಳಿಗೆ ಅಲೆದಾಡುವುದು, ಹದಿನೈದು ಪಂಚಾಯತ್‌ಗಳಿಗೆ ಒಬ್ಬ ಎಂಜಿನಿಯರ್‌ರನ್ನು ನೇಮಿಸಿರುವುದರಿಂದ ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ಕಾಮಗಾರಿ ಮೌಲ್ಯಮಾಪನ ದಾಖಲೆ ಮಾಡಲಾಗದೆ ಅನಂತರ ದಾಖಲಿಸಿ ಬಾವಿಯ, ಅಡಿಕೆ ತೋಟದ, ಕಿಂಡಿ ಅಣೆಕಟ್ಟಿನ ಕಾಮಗಾರಿಯ ಕೆಲಸ ನಿರ್ವಹಿಸುವುದು ಸಾಧ್ಯವಿಲ್ಲ ಎಂದರು. ಇದನ್ನು ಲೆಕ್ಕ ಪರಿಶೋಧಕರು ದಾಖಲಿಸಿ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ತುಳಸಿ ಪಿ. ಸ್ವಾಗತಿಸಿ, ವಂದಿಸಿದರು.