Advertisement

ಕಾಮಗಾರಿ ತರಾತುರಿ, ಗುಣಮಟ್ಟದಲ್ಲಿ ಕಿರಿಕಿರಿ

09:20 PM Mar 16, 2020 | Lakshmi GovindaRaj |

ಯಳಂದೂರು: ಮಾರ್ಚ್‌ ಅಂತ್ಯದಲ್ಲಿ ತಾಲೂಕು ಪಂಚಾಯ್ತಿ ವತಿಯಿಂದ ನಡೆಯುತ್ತಿರುವ ಕಾಮಗಾರಿಯನ್ನು ಬಿಲ್‌ ಮಾಡಿಕೊಳ್ಳುವ ಧಾವಂತದಲ್ಲಿ ತರಾತುರಿಯಲ್ಲಿ ಮಾಡಲಾಗುತ್ತಿದೆ. ಇದರಲ್ಲಿ ಗುಣಮಟ್ಟದ ಮಾನದಂಡಗಳು ಮಾಯವಾಗಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ.

Advertisement

114 ಕಾಮಗಾರಿಗೆ ಅನುಮೋದನೆ: ತಾಲೂಕು ಪಂಚಾಯ್ತಿ ವತಿಯಿಂದ 2019-2020ನೇ ಸಾಲಿನ ವಿವಿಧ ಸಂಯುಕ್ತ ಅನುದಾನ, ಟಿಎಸ್‌ಪಿ ಸೇರಿದಂತೆ ಯೋಜನೆಗಳಲ್ಲಿ ಬಿಡುಗಡೆಗೊಂಡಿರುವ 2.36 ಕೋಟಿ ರೂ. ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ರಸ್ತೆ, ಚರಂಡಿ, ಕುಡಿಯುವ ನೀರು, ಅಂಗನವಾಡಿಗಳ ದುರಸ್ತಿ, ಸುಣ್ಣಬಣ್ಣ ಸೇರಿದಂತೆ ಒಟ್ಟು 114 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನವೆಂಬರ್‌ನಲ್ಲಿ ತಾಪಂ ಸಭೆಯಲ್ಲಿ ಅನುಮೋದಿಸಲಾಗಿದೆ.

ಗುಣಮಟ್ಟಕ್ಕೆ ಆದ್ಯತೆ ನೀಡಿಲ್ಲ: ಈಗ ಕಾಮಗಾರಿಗಳು ಆರ್ಥಿಕ ವರ್ಷ ಮುಗಿಯುತ್ತ ಬರುತ್ತಿದ್ದರೂ ವೇಗ ಪಡೆದುಕೊಂಡಿಲ್ಲ. ಇದರಲ್ಲಿ ಬಹುತೇಕ ಕಾಮಗಾರಿಗಳು ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಪ್ರಾರಂಭವಾಗಿ ಈಗ ವೇಗ ಪಡೆದುಕೊಂಡು ತರಾತುರಿಯಲ್ಲಿ ನಡೆಯುತ್ತಿದೆ. ಇನ್ನೂ ಕೆಲವು ಕಾಮಗಾರಿಗಳ ಇನ್ನೂ ಆರಂಭಗೊಂಡಿಲ್ಲ. ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ನಿಧಾನವಾಗಿ ಆರಂಭಿಸಿ, ಬೇಗ ಮುಗಿಸುವ ಧಾವಂತದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಅಧಿಕಾರಿಗಳು, ಗುತ್ತಿಗೆದಾರರಿಗೂ ನೋಟಿಸ್‌: ತಾಲೂಕು ಪಂಚಾಯ್ತಿಯ ವಿವಿಧ ಯೋಜನೆಗಳ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿದೆ. ಇದರ ಬಗ್ಗೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ನೋಟಿಸ್‌ ನೀಡಿ, ಕಾಮಗಾರಿಯನ್ನು ಅದಷ್ಟು ಬೇಗ ಮುಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಸೂಚಿಸಿದ್ದಾರೆ. ಆದರೂ ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿ ಎಇಇ ಹಾಗೂ ಜೆಇಗಳು ಕಾಮಗಾರಿಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ಕೆಲಸಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ರಜೆಯಲ್ಲೂ ಕೆಲಸ ಮಾಡಲು ಸೂಚನೆ: ತಾಲೂಕಿನ ಕಾಮಗಾರಿಯನ್ನು ಮಾರ್ಚ್‌ ತಿಂಗಳಲ್ಲಿ ಪೂರ್ಣಗೊಳ್ಳಿಸುವ ನಿಟ್ಟಿನಲ್ಲಿ ರಜೆಯಲ್ಲೂ ಸಿಬ್ಬಂದಿಗಳು ಕೆಲಸವನ್ನು ಮಾಡಬೇಕು ಎಂದು ಸೂಚನೆ ನೀಡಲಾಗಿದೆ. 22 ಕಾಮಗಾರಿಗಳು ವಿಳಂಬವಾಗಿದೆ. ಇದರಲ್ಲಿ 10 ಕಾಮಗಾರಿಗಳಿಗೆ ನೋಟಿಸ್‌ ನೀಡಲಾಗಿದೆ. ಈಗ ಕಾಮಗಾರಿಗಳಿಗೆ ಚುರುಕು ಮುಟ್ಟಿದೆ ಎಂದು ಜಿ.ಪಂ ಎಇಇ ಹರೀಶ್‌ ತಿಳಿಸಿದ್ದಾರೆ.

Advertisement

ಗುಣಮಟ್ಟದಲ್ಲಿ ರಾಜಿ ಸಾಧ್ಯವಿಲ್ಲ: ಗುಣಮಟ್ಟದಲ್ಲಿ ಯಾವುದೇ ರಾಜಿಗೆ ಸಾಧ್ಯವಿಲ್ಲ. ಆದಷ್ಟು ಬೇಗ ಕಾಮಗಾರಿ ಮುಗಿಸುವಲ್ಲಿ ಆ ನಿಟ್ಟಿನಲ್ಲಿ ಸ್ಥಳಕ್ಕೆ ಸಂಬಂಧಪಟ್ಟ ಜೆಇಗಳು ಭೇಟಿ ನೀಡಿ ಪರಿಶೀಲಿಸಿ, ಕೆಲಸವನ್ನು ಮಾಡಿಸಲು ಸೂಚನೆ ನೀಡಲಾಗಿದೆ. ಈಗ ಕೆಲಸಗಳೆಲ್ಲಾ ಚುರುಕು ಪಡೆದುಕೊಂಡು ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಲಾಗುವುದು. ಜಿಪಿಎಸ್‌ ಹಾಗೂ ಕೆ2 ಮೂಲಕವೇ ಕಾಮಗಾರಿ ನಡೆಯಬೇಕಿರುವುದರಿಂದ ಅಲ್ಪ ವಿಳಂಬವಾಗಿದೆ ಎಂದು ಹೇಳಿದ್ದಾರೆ.

ತಾಲೂಕಿನ ನಡೆಯುತ್ತಿರುವ ಕಾಮಗಾರಿಗಳಲ್ಲಿ 44 ಕಾಮಗಾರಿಗಳೂ ಕೈಗೊಂಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿ ಎಇಇ ಅಧಿಕಾರಿಗಳಿಗೆ ನೋಟಿಸ್‌ ನೀಡಿ, ಅದಷ್ಟು ಬೇಗ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
-ಬಿ.ಎಸ್‌. ರಾಜು, ಕಾರ್ಯನಿರ್ವಾಹಕ ಅಧಿಕಾರಿ, ಯಳಂದೂರು

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next