Advertisement

ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲವಾದ್ರೆ ಹೋಗಿ

04:22 PM Aug 04, 2019 | Team Udayavani |

ಕುಣಿಗಲ್: ಕೈ ತುಂಬ ಸಂಬಳ ತೆಗೆದುಕೊಳ್ಳುತ್ತೀರ ಆದರೆ ವಿದ್ಯುತ್‌ ಕಲ್ಪಿಸಲು ಮೀನಮೇಷ ಎಣಿಸುತ್ತಿದ್ದೀರ ಎಂದು ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ಡಿ.ಕೆ.ಸುರೇಶ್‌, ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲವಾದರೇ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಎಂದು ಎಚ್ಚರಿಕೆ ನೀಡಿದರು. ಎಚ್ವಿಡಿಎಸ್‌ ಯೋಜನೆ ಯಡಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕಕ್ಕೆ ತಿಂಗಳು ಕಳೆದರೂ ಕೇಬಲ್ ಹಾಕಿಲ್ಲ, ಇದರಿಂದ ಕುಡಿ ಯುವ ನೀರಿಗೆ ತೊಂದರೆ ಉಂಟಾಗಿದೆ ಎಂದು ಹುತ್ರಿದುರ್ಗ ಹೋಬಳಿ ಜೋಡಿಹೊಸಹಳ್ಳಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ರೈತರ ದೂರಿಗೆ ಸಂಸದರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

Advertisement

ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಸಂಬಳ ತೆಗೆದುಕೊಂಡು ಗುತ್ತಿಗೆದಾರ ರಿಂದ ಹಣ ವಸೂಲಿ ಮಾಡುವುದಲ್ಲ ಎಂದು ಬೆಸ್ಕಾಂ ಎಇಇ ವೀರಭದ್ರಯ್ಯ, ಸೆಕ್ಷನ್‌ ಆಫೀಸರ್‌ ರಾಜು, ಕಾಮಗಾರಿ ಎಇ ಶಾಂತರಾಮು ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಯಾಗಿಲ್ಲ. ಪಿಡಿಒ ಬಿ.ಎಸ್‌.ಲೋಕೇಶ್‌ ಗಮನನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ವಾರದ ಒಳಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಪಿಡಿಒಗೆ ಸಂಸದರು ಸೂಚಿಸಿದರು.

ಅಧಿಕಾರಿಗಳಿಗೆ ಬುದ್ಧಿ ಕಲಿಸಿ: ಹೊಸ ಐ.ಪಿ ಸೆಟ್‌ಗೆ ಚಾರ್ಜ್‌ ಮಾಡಲು ಹಾಗೂ ಮೀಟರ್‌ ಅಳವಡಿಸಲು ಹಣ ನೀಡಬೇಕು. ಇಲ್ಲವಾದಲ್ಲಿ ಬೆಸ್ಕಾಂ ಅಧಿಕಾರಿಗಳು ಬರುವುದಿಲ್ಲ ಎಂದು ಜನರು ಅಳಲು ತೋಡಿಕೊಂಡರು. ಹಣಕ್ಕಾಗಿ ಬಲವಂತ ಮಾಡುವ ಅಧಿಕಾರಿಗಳಿಗೆ ಬುದ್ಧಿ ಕಲಿಸಿ ನಾನಿದ್ದೇನೆ ಎಂದು ಸಂಸದರು ಹೇಳಿದರು.

ಪಂಚಾಯಿತಿಗೆ ಎಲ್ಲಾ ಅಧಿಕಾರ ಕೊಟ್ಟಿದೆ. ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸಬೇಕು. 20 ದಿನದ ಒಳಗೆ ಕೆಡಿಪಿ ಸಭೆ ಕರೆಯುತ್ತೇನೆ. ಮೂರು ತಿಂಗಳು ತಾಲೂಕಿನಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.

ಶಾಸಕ ಡಾ.ಎಚ್.ಡಿ.ರಂಗನಾಥ್‌, ಉಪವಿಭಾಗಾಧಿಕಾರಿ ಶಿವಕುಮಾರ್‌, ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌, ಇಒ ಶಿವರಾಜಯ್ಯ, ಸದಸ್ಯ ಐ.ಎ. ವಿಶ್ವನಾಥ್‌, ಗ್ರಾಪಂ ಅಧ್ಯಕ್ಷೆ ಬೋರಮ್ಮ, ಸದಸ್ಯರಾದ ಭಾಗ್ಯಮ್ಮ, ರಮೇಶ್‌, ಕೊಲ್ಲಾಪುರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ, ಮುಖಂಡ ಕೆಂಪೀರೇ ಗೌಡ ಮತ್ತಿತರರು ಇದ್ದರು.

ಲಿಂಕ್‌ ಕೆನಾಲ್ ತಡೆಗೆ ಹುನ್ನಾರ:

ಜಿಲ್ಲೆಗೆ 24 ಟಿಎಂಸಿ ನೀರು ನಿಗದಿಪಡಿಸಲಾಗಿದೆ. ಈ ಪೈಕಿ ಕುಣಿಗಲ್ ತಾಲೂಕಿಗೆ ನಿಗದಿಪಡಿಸಿರುವ 3.5 ಟಿಎಂಸಿ ನೀರು 25 ವರ್ಷದಿಂದ ಹರಿದಿಲ್ಲ, ಹೀಗಾಗಿ ದೊಡ್ಡಕೆರೆಗೆ ನೀರು ಹರಿಸಲು ಲಿಂಕ್‌ ಕೆನಾಲ್ ಯೋಜನೆ ರೂಪಿಸಲಾಗಿದ್ದು, ಈಗಿನ ಸರ್ಕಾರದ ಕೆಲ ವ್ಯಕ್ತಿಗಳು ಕಾಮಗಾರಿ ತಡೆಯಲು ಕುತಂತ್ರ ನಡೆಸುತ್ತಿದ್ದಾರೆ. ನಮ್ಮ ಪಾಲಿನ ನೀರು ಪಡೆಯಲು ಜಿಲ್ಲೆಯ ಕೆಲವರೊಂದಿಗೆ ಹೋರಾಟ ಮಾಡುವಂತಾಗಿದೆ ಎಂದರು. ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಅಣಿಯಾಗಬೇಕು ಎಂದು ಸಂಸದರು ಕರೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ, ತಾಲೂಕಿಗೂ ಯಡಿಯೂರಪ್ಪ ಅವರಿಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ಯೋಜನೆಗೆ ತೊಂದರೆ ಯಾಗಲ್ಲ ಎಂದು ಹೇಳಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next