Advertisement

ಆಲಸ್ಯ ಬಿಡಿ ಕೆಲಸ ಮಾಡಿ

02:41 PM Sep 12, 2017 | Team Udayavani |

ರಾಯಚೂರು: ನೀವು ಮಾಡುವ ಬೇಜವಾಬ್ದಾರಿ ಕೆಲಸಗಳಿಂದಾಗಿ ಸದಸ್ಯರಿಂದ ನಾವು ಟೀಕೆ ಎದುರಿಸುವಂತಾಗಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ನೀತಿ ಅನುಸರಿಸದೆ ತ್ವರಿತ ಕ್ರಮಕ್ಕೆ ಮುಂದಾಗಬೇಕು ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ ಹಲವು ವಿಚಾರಗಳನ್ನು ಪುನರ್‌ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಂಬಂಧಿಸಿ ಟೆಂಡರ್‌ ಪ್ರಕ್ರಿಯೆಯನ್ನು ಕೂಡಲೇ ಮುಗಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ನೀರು ಸಿಗುತ್ತಿಲ್ಲ ಎಂಬ ದೂರುಗಳಿವೆ. ಎಲ್ಲ ಘಟಕಗಳು ಸರಿಯಾಗಿವೆಯಾ ಎಂದು ಪರೀಕ್ಷಿಸಿ. ಸರ್ಕಾರಿ ಶಾಲೆಗಳಿಗೆ ಜಾರಿಗೆ ತಂದಿರುವ ಬಿಸಿಯೂಟಕ್ಕೆ ಪೂರಕ ಸಸಿಗಳನ್ನು ನೆಡಲು ತೋಟಗಾರಿಕೆ ಇಲಾಖೆಗೆ ಸೂಚಿಸಲಾಗಿತ್ತು. ಆದರೆ, ಕೆಲವೆಡೆ ಮಾತ್ರ ನೆಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಸಿಇಒ ಅಭಿರಾಮ್‌ ಶಂಕರ. ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಎರಡು ತಿಂಗಳೊಳಗೆ ಮುಗಿಸಬೇಕು. ಆರ್‌ಒ ಪ್ಲಾಂಟ್‌ಗಳ ಸ್ಥಿತಿಗತಿ ಬಗ್ಗೆ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ವಸತಿ ಯೋಜನೆಗಳ ಮನೆ ಹಂಚಿಕೆಯನ್ನು ಆಯಾ ಜಿಪಂ ಸದಸ್ಯರಿಗೆ ತಿಳಿಸಿ, ಅವರ ಅನುಮತಿಯೊಂದಿಗೆ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡುವಂತೆ ಇಒಗಳಿಗೆ ಸೂಚಿಸಿದರು.

ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು ಮಾತನಾಡಿ, ಉದ್ಯೋಗ ಖಾತ್ರಿಯಡಿ ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ. ಕೃಷಿ ಚಟುವಟಿಕೆ ನಡೆಯುತ್ತಿದ್ದು, ಈಗ ಕಾಮಗಾರಿ ಶುರು ಮಾಡಿದರೆ ಕೂಲಿ ಹಣ ಹೆಚ್ಚು ನೀಡಬೇಕಿದೆ. ರೈತಾಪಿ ವರ್ಗಕ್ಕೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.

Advertisement

ಕಲ್ಲೂರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಸಾಕಷ್ಟು ಅನುದಾನವಿದ್ದರೂ ಕಾಮಗಾರಿ
ಮುಗಿಸಿಲ್ಲ. ಈ ಬಗ್ಗೆ ಸಿಇಒ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು. ಸಿಇಒ ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸದಸ್ಯ ಶಿವನಗೌಡ ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳು ಮಳೆಗೆ ಹದಗೆಟ್ಟು ಹೋಗಿವೆ. ಖಾತರಿ ಯೋಜನೆಯಡಿ ರಸ್ತೆಗಳ ದುರಸ್ತಿಗೊಳಿಸಿ ಎಂದು ಆಗ್ರಹಿಸಿದರು.

ನಿವೇಶನ ರಹಿತ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ನಿವೇಶನ ಕಲ್ಪಿಸಬೇಕು. ಆದರೆ, ನಿವೇಶನಗಳು ಇಲ್ಲದಿದ್ದರೆ, ಭೂಮಿ ಖರೀದಿಸಿ ನಿವೇಶನ ನೀಡುವಂತೆ ಸರ್ಕಾರದ ಆದೇಶವಿದ್ದರೂ ಜಿಲ್ಲೆಯಲ್ಲಿ ಯಾವುದೇ ಪಂಚಾಯಿತಿಗಳಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಸಿಇಒ ಅಭಿರಾಮ್‌, ಜಿಲ್ಲೆಯ ಪ್ರತಿ ಗ್ರಾಮಸಭೆಗಳಲ್ಲಿ ಶಿಷ್ಟಾಚಾರ ಪಾಲಿಸಬೇಕು. ಪ್ರತಿ ವಾರವೂ ಅ ಧಿಕಾರಿಗಳಿಂದ ಮಾಹಿತಿ ಪಡೆಯ ಲಾಗುವುದು ಎಂದು ತಿಳಿಸಿದರು. ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಉಪಾಧ್ಯಕ್ಷೆ ಗೀತಾ ಕರಿಯಪ್ಪ ವಜ್ಜಲ್‌, ಸದಸ್ಯರು, ಅಧಿಕಾರಿಗಳು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next