ರಾಯಚೂರು: ವಚನಕಾರರು ಯಾವುದೇ ಮತ, ಧರ್ಮಕ್ಕೆ ಸೀಮಿತವಾಗದೇ ಎಲ್ಲ ವರ್ಗಕ್ಕೂ ಸೇರಿದವರಾಗಿದ್ದಾರೆ. ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದವರು ಶರಣರು ಎಂದು ಜಿಪಂ ಸಿಇಒ ಅಭಿರಾಂ ಜಿ. ಶಂಕರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುಂಬಾರ ಸಮಾಜದ ಸಹಯೋಗದಲ್ಲಿ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ನಡೆದ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆಯ ಚಿಕ್ಕ ಹಳ್ಳಿಯಲ್ಲಿ ಜನಿಸಿದ ಸರ್ವಜ್ಞರು, ತ್ರಿಪದಿಗಳನ್ನು ರಚಿಸುವ ಮೂಲಕ ಜಗದ್ವಿಖ್ಯಾತರಾದರು.
ಕನ್ನಡದಲ್ಲಿ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ಬರೆದು ಸಮಾಜದ ಪ್ರತಿಯೊಬ್ಬರಿಗೆ ಅನ್ವಯವಾಗುವಂಥ ಸಂದೇಶಗಳನ್ನು ಸಾರಿದರು ಎಂದರು.
ಚುನಾವಣೆ ಸಮೀಪಿಸುತ್ತಿದ್ದು, ಸಮಾಜದವರು ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ಉತ್ತಮರನ್ನು ಆಯ್ಕೆ ಮಾಡಬೇಕು ಎಂದ ಅವರು, ಪಾರದರ್ಶಕವಾಗಿ ಮತ ಚಲಾಯಿಸುವ ಕುರಿತು ಪ್ರತಿಜ್ಞಾವಿಧಿ ಭೋದಿಸಿದರು.
ದೇವರಾಜ ಅರಸು ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ಬಿ.ನಾಗಪ್ಪ ಗಿರಣಿ ಮಾತನಾಡಿ, ಪ್ರತಿ ಸಮಾಜದಲ್ಲಿ ಭಿನ್ನಮತ ಸಹಜ. ತಾವು ಸಂಘಟಿತರಾದಾಗ ಮಾತ್ರ ಸಮಾಜ ಬಲಿಷ್ಠಗೊಳ್ಳಲು ಸಾಧ್ಯ. 2017-18ನೇ ಸಾಲಿನಲ್ಲಿ ಕುಂಬಾರ ಸಮಾಜದ ಅಭಿವೃದ್ಧಿಗೆ ಸರ್ಕಾರ 15 ಕೋಟಿ ರೂ. ನೀಡಿದೆ. ವಿದೇಶದಲ್ಲಿ ಓದುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 10 ಲಕ್ಷದವರೆಗೆ ಧನ ಸಹಾಯ ನೀಡಲಾಗುತ್ತದೆ. ಒಟ್ಟು 29 ಕೋರ್ಸ್‌ಗಳಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವದಲ್ಲದೆ 18ರಿಂದ 35 ವರ್ಷದ ಯುವಕರ ಸ್ವ ಸಹಾಯ ಸಂಘಗಳಿಗೆ 3.5 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ ಎಂದರು.
ಸಾಹಿತಿಗಳಾದ ಬನ್ನಪ್ಪ ಬಿ.ಕುಂಬಾರ ವಿಶೇಷ ಉಪನ್ಯಾಸ ನೀಡಿ, ಬಸವಣ್ಣ, ಅಂಬಿಗರ ಚೌಡಯ್ಯ, ಸರ್ವಜ್ಞರ ತತ್ವಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಸಮಾಜಕ್ಕೆ ಅಂಟಿಕೊಂಡಿರುವ ಕೆಟ್ಟ ಸಂಪ್ರಾದಾಯಗಳನ್ನು ತಮ್ಮ ವಚನಗಳ ಮೂಲಕ ನಿವಾರಿಸಿ ಸಮಾಜ ತಿದ್ದುವ ಕೆಲಸ ಮಾಡಿದರು. ಸರ್ವಜ್ಞ 16ನೇ ಶತಮಾನದಲ್ಲಿ ವ್ಯಾಕರಣದಲ್ಲಿ ರಚಿಸಿದ ಅವರ ವಚನಗಳು 7 ಕೋಟಿ 7 ಲಕ್ಷ 75 ಸಾವಿರ ವಚನಗಳೆಂದು ತಮ್ಮ ವಚನದಲ್ಲಿ ಹೇಳಿದ್ದಾರೆ. ಲಭ್ಯವಿರುವ 2 ಸಾವಿರ ವಚನಗಳನ್ನು ಮಾತ್ರ ಅವರು ಯಾವ ರಾಜರ ಆಶ್ರಯದಲ್ಲಿ ಬೆಳೆಯದೆ ಕಂಡಿದ್ದನ್ನು ಕಂಡಂತೆ ಬರೆದಿದ್ದರು ಎಂದು ವಿವರಿಸಿದರು.
ಬೆಳಗ್ಗೆ ಗಂಜ್ ವೃತ್ತದಲ್ಲಿ ಸರ್ವಜ್ಞ ಭಾವಚಿತ್ರ ಮೆರವಣಿಗೆಗೆ ನಗರಸಭೆ ಉಪಾಧ್ಯಕ್ಷ ಜಯಣ್ಣ ಚಾಲನೆ ನೀಡಿದರು. ಗಂಜ್
ವೃತ್ತದಿಂದ ಚಂದ್ರ ಮೌಳೇಶ್ವರ ವೃತ್ತ ತೀನ್ ಕಂದಿಲ್, ಡಾ| ಬಿ.ಆರ್.ಅಂಬೇಡ್ಕರ್ ವೃತ್ತಗಳ ಮಾರ್ಗವಾಗಿ ಮೆರವಣಿಗೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರಕ್ಕೆ ತಲುಪಿತು.
ಹೈ-ಕ ವಿಭಾಗದ ಕುಂಬಾರ ಸಂಘದ ಅಧ್ಯಕ್ಷ ವೈ. ಸುರೇಂದ್ರಬಾಬು, ಉಪಾಧ್ಯಕ್ಷ ವೀರಭದ್ರಪ್ಪ, ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ, ಗ್ರೇಡ್ 2 ತಹಶೀಲ್ದಾರ್ ಅನಿಲ್, ಪ್ರೊಬೇಷನರಿ ತಹಶೀಲ್ದಾರ್ ಸಂತೋಷಿ ರಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಸೇರಿ ಕುಂಬಾರ ಸಮಾಜದವರು ಪಾಲ್ಗೊಂಡಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.