ನವಲಗುಂದ:ನವಲಗುಂದ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿಟ್ಟು ಶ್ರಮ ವಹಿಸಿದರೆ ಪುರಸಭೆ ಆಡಳಿತ ಕೈ ವಶವಾಗಲಿದೆ ಎಂದು ಜಿಲ್ಲಾಧ್ಯಕ್ಷ ಅನೀಲ ಕುಮಾರ ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿನ ಹುರಕಡ್ಲಿ ಅಜ್ಜನವರ ಕಲ್ಯಾಣ ಕೇಂದ್ರದಲ್ಲಿ ಪುರಸಭೆ ಚುನಾವಣಾ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪುರಸಭೆ ಚುನಾವಣೆಗೆ ಒಂದೊಂದು ವಾರ್ಡ್‌ಗಳಲ್ಲಿ ಮೂರ್‍ನಾಲ್ಕು ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದಾರೆ. ಪಕ್ಷ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯವಿದೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮ ವಹಿಸಬೇಕೆಂದರು. ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಹಿರಿಯ ಮುಖಂಡರು ಸೇರಿ ಯಾರ ಹೆಸರು ಸೂಚಿಸುತ್ತಾರೋ ಅಂತಹವರಿಗೆ ಪಕ್ಷ ಟಿಕೆಟ್ ನೀಡಲಿದೆ ಎಂದರು.
ಮಾಜಿ ಸಚಿವ ಕೆ.ಎನ್.ಗಡ್ಡಿ ಮಾತನಾಡಿ, ಕಳೆದ ಎರಡು ದಶಕಗಳ ಹಿಂದೆ ಪಟ್ಟಣದಲ್ಲಿ ಮೂಲಸೌಲಭ್ಯವಿಲ್ಲದೆ ನೌಕರರು ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದರು. ಈ ನನ್ನ ಅವಧಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲಸೌಲಭ್ಯ ನೀಡಿದ್ದರಿಂದ ಪಟ್ಟಣದಲ್ಲಿ ಎಲ್ಲ ವರ್ಗದ ಜನರು ಇಲ್ಲಿ ವಾಸಿಸಲು ಸಿದ್ಧರಾಗಿದ್ದಾರೆ. ಪುರಸಭೆ ಕಾಂಗ್ರೆಸ್ ಪಕ್ಷದ ಚುಕ್ಕಾಣೆ ಹಿಡಿದು ಉತ್ತಮ ಆಡಳಿತ ನೀಡಿದ ದಿಸೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಒಲುವು ತೋರುತ್ತಿದ್ದಾರೆ ಎಂದರು.
ಯುವ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಮಾತನಾಡಿ, ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪಕ್ಷದ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಶನಕ್ಕೆ ಮುಂದಾಗಬೇಕೆಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಿವಾನಂದ ಕರಿಗಾರ, ಸುಭಾಸ ದ್ಯಾಮಕನವರ, ಬಾಬುಗೌಡ ಪಾಟೀಲ ಮತ್ತಿತರರು ಮಾತನಾಡಿದರು.
ಮಹಿಳಾ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ, ಆರ್.ಎಚ್.ಕೋನರಡ್ಡಿ ಮತ್ತಿತರರು ಇದ್ದರು. ಉಸ್ಮಾನ ಬಬರ್ಚಿ ನಿರೂಪಿಸಿದರು. ತೇರದಾಳ ವಂದಿಸಿದರು.