Advertisement

ಸಾಧಿಸುವ ಛಲ ಗಟ್ಟಿಯಾಗಿರಬೇಕು: ಸೀತಾರಾಮ ಮಾಸ್ಟರ್‌

01:53 PM Jul 08, 2019 | Team Udayavani |

ಬದಿಯಡ್ಕ: ಕಷ್ಟ ಬಂದರೆ ಏನನ್ನೂ ಸಾಧಿಸಬಹುದು. ಸ್ಪಷ್ಟವಾದ ಗುರಿ ಹಾಗೂ ಅದನ್ನು ಸಾದಿಸುವ ಹಟ, ಛಲ ನಮ್ಮಲ್ಲಿ ಗಟ್ಟಿಯಾಗಿರಬೇಕು. ಪ್ರಯತ್ನ ಮತ್ತು ದಿಟ್ಟ ನಿರ್ಧಾರಗಳು ಜತೆ ಸೇರಿದಾಗ ಗೆಲುವು ನಮ್ಮದಾಗುತ್ತದೆ ಎಂದು ಸೀತಾರಾಮ ಮಾಸ್ಟರ್‌ ಹೇಳಿದರು.

Advertisement

ಬದಿಯಡ್ಕ ಗುರುಸದನದಲ್ಲಿ ನಾಟ್ಯನಿಲಯಂ ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ ಉದನೇಶ್ವರ ಶಾಖೆಯಲ್ಲಿ ಆಯೋಜಿಸಿದ ಕರ್ನಾಟಕ ಆಯುರ್ವೇದ ವೈದ್ಯಕೀಯ ಪರೀಕ್ಷೆಯಲ್ಲಿ ರ್‍ಯಾಂಕ್‌ ವಿಜೇತ ವಿದ್ಯಾರ್ಥಿನಿಗೆ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆ ಯಾವುದು, ಎಷ್ಟು ಹಣ ಖರ್ಚು ಮಾಡುತ್ತೇವೆ ಎಂಬುದಲ್ಲ ಬದಲಾಗಿ ಎಷ್ಟರ ಮಟ್ಟಿಗೆ ಶಿಕ್ಷಕರ ಸಹಕಾರ, ಹೆತ್ತವರ ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳ ಪರಿಶ್ರಮವಿರುತ್ತದೆ ಎನ್ನುವುದರ ಮೇಲೆ ಗೆಲುವು ನಿರ್ಧಾರವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖೀಲೇಶ್‌ ನಗುಮುಗಂ ನಾವೇನಾಗಬೇಕು ಎಂಬ ತೀರ್ಮಾನ ನಮ್ಮೊಳಗೆ ನಿರ್ಧಾರವಾಗಬೇಕು. ಅದನ್ನು ಕೈಗೂಡಿಸುವಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ಹೆದರಿ ಹಿಂದಡಿಯಿಟ್ಟರೆ ಉದ್ಧೆಶಿತ ಗುರಿ ಮುಟ್ಟುವುದು ಅಸಾಧ್ಯ. ಆದುದರಿಂದ ಸತತವಾದ ಪೆಟ್ಟಿಗೆ ಶಿಲೆ ಶಿಲ್ಪವಾಗುವಂತೆ ಸವಾಲುಗಳನ್ನು ಮೆಟ್ಟಿನಿಂತು ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ಸಾಧಿಸಿ ತೋರಿಸುವ ಗುಣವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು

ರ್‍ಯಾಂಕ್‌ ವಿಜೇತೆ ಡಾ.ರಮ್ಯಾ ಅವರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಹರಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರಮ್ಯಾ ಸತತವಾದ ಓದು ಹಾಗೂ ಪರಿಶ್ರಮದಿಂದ ಮಾತ್ರ ನಮಗೆ ಜೀವನದಲ್ಲಿ ಗುರಿ ತಲುಪಲು ಸಾಧ್ಯ. ಯಾವುದೇ ಕಾರ್ಯವಾದರೂ ಏಕಾಗ್ರತೆಯಿಂದ, ಹಟಹಿಡಿದು ಪ್ರಯತ್ನಿಸಿದಲ್ಲಿ ಕೈಗೂಡುತ್ತದೆ. ಸಮಯ ಪ್ರಜ್ಞೆ ಹಾಗೂ ಅಗತ್ಯದ ವಿಚಾರಗಳನ್ನು ಸ್ವೀಕರಿಸುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಪುಸ್ತಕಗಳ ನಂಟು ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ತನ್ನ ಅನುಭವಗಳನ್ನು ಹಂಚಿದರು. ರಮ್ಯಾಳ ತಂದೆ ಗುರುಸದನದ ಮಾಲಿಕ ರಾಮ ಭಟ್‌ ಉಪಸ್ಥಿತರಿದ್ದರು. ಗುರು ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ ಸ್ವಾಗತಿಸಿ ಕು.ಅಭಿಜ್ಞಾ ವಂದಿಸಿದರು. ನಾಟ್ಯನಿಲಯಂ ಉದನೇಶ್ವರ ಶಾಖೆಯ ವಿದ್ಯಾರ್ಥಿಗಳು ಹಾಗೂ ಹೆತ್ತವರು ಭಾಗವಹಿಸಿದರು.

Advertisement

ಗೆಲುವು ಎನ್ನುವುದು ವರ್ಷಗಳ ತ್ಯಾಗ, ಪ್ರಯತ್ನ, ಪರಿಶ್ರಮದ ಫಲ. ವೈದ್ಯಕೀಯ ರಂಗದಲ್ಲಿ 5 ರ್‍ಯಾಂಕ್‌ಗಳನ್ನು ಗಳಿಸುವುದು ಅಸಾಮಾನ್ಯ ಸಾಧನೆ. ರಮ್ಯಾ ತನ್ನ ಗುರಿ ತಲುಪುವ ಮೂಲಕ ಇತರರಿಗೂ ಮಾದರಿಯಾಗಿದ್ದಾಳೆ. ನಾವು ನೀಡುವ ಈ ಸಮ್ಮಾನ ಈಕೆಯ ಸಾಧನೆಗೆ ನೀಡುವ ಪ್ರೋತ್ಸಾಹ . ನಮ್ಮನ್ನು ನಾವು ದಂಡಿಸಿದರೆ ಮಾತ್ರ ಮುಂದೆ ಲಭಿಸುವ ನಿಜವಾದ ಆನಂದವನ್ನು ಅನುಭವಿಸಲು ಸಾಧ್ಯ.
ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ.

Advertisement

Udayavani is now on Telegram. Click here to join our channel and stay updated with the latest news.

Next