ಯಾದಗಿರಿ: ಸಮಾಜದ ಏಳ್ಗೆಗಾಗಿ ಎಲ್ಲರೂ ದುಡಿಯಬೇಕು. ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕರು ಬಡವರಿದ್ದಾರೆ. ಅಂತವರಿಗೆ ಸಹಾಯ ಮಾಡಬೇಕು. ಅಂದಾಗಲೇ ಮಾತ್ರ ಸಮಾಜ ಅಸ್ಥಿತ್ವಕ್ಕೆ ಬಂದಿರುವುದಕ್ಕೆ ಸಾರ್ಥಕವಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನಾವೆಲ್ಲರೂ ಸೇರಿ ಹಣಕಾಸಿನ ಸಹಾಯ ಮಾಡಬೇಕು. ಬಹುತೇಕರ ಬಡ ವಿದ್ಯಾರ್ಥಿಗಳು ಐಎಎಸ್ ಹಾಗೂ ಐಪಿಎಸ್ ಓದುವ ಹಂಬಲವಿರುತ್ತದೆ. ಆದರೆ, ಅವರಿಗೆ ತೀವ್ರ ಆರ್ಥಿಕ ಅಡಚಣೆ ಇರುತ್ತವೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ನೀಡಬೇಕು. ಪ್ರಸ್ತುತ ಆಯ್ಕೆಯಾದ ಸಮಾಜದ ಪದಾ ಧಿಕಾರಿಗಳು ಸಮಾಜದ ಪರ ಕೆಲಸ ಮಾಡಲಿ ಎಂದರು.
ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಸೋಮಶೇಖರ ಮಣ್ಣೂರು ಮಾತನಾಡಿ, ಮುಂಬರುವ ದಿನಗಳಲ್ಲಿ ಸಮಾಜ ಪರ ಕೆಲಸ ಮಾಡುವುದರ ಜೊತೆಗೆ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ಮಾತನಾಡಿ, ಸಮಾಜದಲ್ಲಿ ಹುದ್ದೆ ಹೊಂದುವುದು ಪ್ರಮುಖವಲ್ಲ. ಸಮಾಜದ ಏಳ್ಗೆಗಾಗಿ ಎಲ್ಲರೂ ಕೈಜೋಡಿಸಬೇಕು. ಈಗಿನ ಜಿಲ್ಲಾ ಹಾಗೂ ಯುವ ಘಟಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಸದಸ್ಯರ ಹೆಸರು ನೋಂದಾಯಿಸುವ ಮೂಲಕ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಬೇಕು ಎಂದರು.
ಅಯ್ಯಣ್ಣ ಹುಂಡೇಕಾರ ಮಾತನಾಡಿದರು. ಯಾದಗಿರಿಯಲ್ಲಿ ವೀರಶೈವ ವಸತಿ ನಿಲಯ ನಿರ್ಮಾಣಕ್ಕೆ ಕಲಬುರಗಿ ವೀರಶೈವ ಮಹಾಸಭಾ ಘಟಕದ ಶರಣುಕುಮಾರ ಮೋದಿ ಹಾಗೂ ಮಹಾದೇವಪ್ಪ ಅಬ್ಬೆತುಮಕೂರು ತಲಾ ಒಂದು ಲಕ್ಷ ಹಾಗೂ ಬಂಡೆಪ್ಪ ಆಕಳ ಅವರು 50 ಸಾವಿರ ರೂ. ದೇಣಿಗೆ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಹಾಗೂ ಯುವ ಘಟಕಕ್ಕೆ ಆಯ್ಕೆಯಾದ ಪದಾ ಧಿಕಾರಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ವೀರಬಸಂತರೆಡ್ಡಿ ಮುದ್ನಾಳ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಮಾಜಿ ಎಂಎಲ್‌ಸಿ ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಮಹಾದೇವಪ್ಪ ಅಬ್ಬೆತುಮಕೂರು, ಅವಿನಾಶ ಜಗನ್ನಾಥ್, ಡಾ| ಸುಭಾಶಚಂದ್ರ ಕೌಲಗಿ ಇದ್ದರು.