ಬೆಂಗಳೂರು: ರಾಜ್ಯದಲ್ಲಿ ನಮ್ಮದೇ ಸರಕಾರ ಇದೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ನಿಜವಾದ ಡಬಲ್ ಎಂಜಿನ್ ಸರಕಾರ ನಮ್ಮದಾಗಲಿದೆ. ಇದಕ್ಕಾಗಿ 30 ದಿನಗಳು ಶ್ರಮವಹಿಸಿ, 5 ವರ್ಷ ನೆಮ್ಮದಿಯಿಂ ದಿರಿ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕರ್ತರಿಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾಧ್ಯಮ ಮತ್ತು ಸಂವಹನ ವಿಭಾಗ ಹಾಗೂ ಸಾಮಾಜಿಕ ಜಾಲತಾಣ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಸಲ್ ಪವರ್ (ತೋಳ್ಬಲ), ಮನಿ ಪವರ್ (ಹಣಬಲ) ಮತ್ತು ಮಿಸ್ ಇನ್‌ಫರ್ಮೇಶನ್ (ತಪ್ಪು ಮಾಹಿತಿ) ದೊಡ್ಡ ಅಪಾಯಕಾರಿಯಾಗಿವೆ ಎಂದು ಚುನಾವಣ ಆಯೋಗ, ಸುಪ್ರೀಂ ಕೋರ್ಟ್ ಹೇಳಿದೆ. ಈ “3 ಎಂ’ಗಳಲ್ಲಿ ಕೊನೆಯದಾದ ಮಿಸ್ ಇನ್‌ಫರ್ಮೇಶನ್ ಹೆಚ್ಚು ಅಪಾಯಕಾರಿಯಾಗಿದೆ ಎಂದರು.
ಈ ಮೂರನ್ನೂ ಬಳಸುವ ಪ್ರಧಾನಿ ನರೇಂದ್ರ ಮೋದಿ ಕೂಡ ಈ “3 ಎಂ’ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಐಟಿ ಸೆಲ್ ಮುಚ್ಚಿದರೆ ಮಿಸ್ ಇನ್‌ಫರ್ಮೇಶನ್ ಕೂಡ ಬಂದ್ ಆಗುತ್ತದೆ. ಸುವರ್ಣಯುಗ, ಅಚ್ಛೇದಿನ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ, ಅಚ್ಛೇ ದಿನ್ ತಂದಿಲ್ಲ. ಬೆಲೆಯೇರಿಕೆ, ತೆರಿಗೆ ಹಕ್ಕಿನ ವಿಚಾರ ಇಟ್ಟುಕೊಂಡು ನಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದರು. ಈಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿದಿದೆಯೇ? ಈ ದೇಶಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲವೆಂದು ಬಿಂಬಿಸುತ್ತಾರೆ. ಎನ್‌ಎಎಲ್, ಎಚ್‌ಎಎಲ್‌ನಂತಹ 20ಕ್ಕೂ ಹೆಚ್ಚು ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕಾಂಗ್ರೆಸ್ ಸರಕಾರಗಳು ಬೆಂಗಳೂರಿಗೆ ಕೊಟ್ಟಿವೆ. ಬಿಜೆಪಿ ಸೃಷ್ಟಿಸಿದ್ದೇನೂ ಇಲ್ಲ. ನಮ್ಮ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದವರು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಇದು ಪಿಎಂ ಎಲೆಕ್ಷನ್ನೋ? ಎಂಪಿ ಎಲೆಕ್ಷನ್ನೋ? ಕ್ಷೇತ್ರಕ್ಕೆ ಎಂಪಿ ಏನು ಮಾಡಿದ್ದಾರೆಂದು ಪ್ರಶ್ನಿಸಬೇಕು. ಬೆಲೆಯೇರಿಕೆ, ನಿರುದ್ಯೋಗ, ತೆರಿಗೆ ಹಕ್ಕುಗಳನ್ನು ಪ್ರಶ್ನಿಸಿ ಎಂದು ಸಲಹೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್, ಮಾಧ್ಯಮ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ರಮೇಶ್ ಬಾಬು ಇದ್ದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 8-10 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಅವರ ಆಂತರಿಕ ಸಮೀಕ್ಷೆಗಳೇ ಹೇಳುತ್ತಿವೆ. ಕಾಂಗ್ರೆಸ್ 18ರಿಂದ 20 ಕ್ಷೇತ್ರ ಗೆಲ್ಲಲಿದೆ. ಬೆಂಗಳೂರಿನ ಕೆಫೆ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಪದಾಧಿಕಾರಿಯನ್ನು ಎನ್‌ಐಎ ವಶಕ್ಕೆ ಪಡೆದಿದೆ. ಅದರ ಬಗ್ಗೆ ಸ್ಪಷ್ಟನೆ ಕೊಡಲಿ.
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ