Advertisement

ಕಿತ್ತೊದ ರಸ್ತೆ; ಚರಂಡಿ ಹಾವಳಿ!

04:16 PM Sep 23, 2018 | Team Udayavani |

ಕೊಪ್ಪಳ: ನಗರದ ಅಭಿವೃದ್ಧಿಯನ್ನೊಮ್ಮೆ ನೋಡಿದರೆ ಅಯ್ಯೋ.. ಎಂದೆನಿಸುತ್ತದೆ. ಎಲ್ಲೆಡೆ ನಡೆದಿರುವ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿವೆ. ರಸ್ತೆಗಿಂತ ಚರಂಡಿಗಳನ್ನೇ ಎತ್ತರ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಪ್ರಯಾಣಿಕರಿಗೆ ಪ್ರಾಣ ಸಂಕಟ ಶುರುವಾಗಿದೆ. ಇಲ್ಲಿನ ಅಭಿವೃದ್ಧಿ ವೈಖರಿಗೆ ಜನರೇ ಬೇಸರ ವ್ಯಕ್ತಪಡಿಸುವಂತಾಗಿವೆ.

Advertisement

ಹೌದು. ನಗರವನ್ನು ಚಂಡೀಗಡ್‌ ಮಾದರಿ ನಿರ್ಮಾಣ ಮಾಡುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿಕೊಂಡು ಸುತ್ತಾಡುತ್ತಿದ್ದಾರೆ. ಆದರೆ, ಸರಿಯಾದ ಅಭಿವೃದ್ಧಿ ಕಾಣುತ್ತಿಲ್ಲ. ರಸ್ತೆಗಳ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಅಲ್ಲದೇ ನಿಧಾನಗತಿಯಲ್ಲಿ ನಡೆಸಲಾಗುತ್ತಿದೆ.

ಪ್ರಸ್ತುತ ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-63 ನಿರ್ಮಾಣ ನಡೆದಿದೆ. ಈ ಮೊದಲಿದ್ದ ರಸ್ತೆ ಕಿತ್ತು ಕಾಂಕ್ರೀಟ್‌ ರಸ್ತೆ ಮಾಡಲಾಗುತ್ತಿದೆ. ಎರಡು ಬದಿಯಲ್ಲಿ ಚರಂಡಿಯನ್ನೂ ನಿರ್ಮಾಣ ಮಾಡಲಾಗುತ್ತಿದೆ. ಆದರೆ ರಸ್ತೆಗಿಂತ ಚರಂಡಿಗಳೇ ಎತ್ತರದಲ್ಲಿವೆ. ಆದ್ದರಿಂದ ಇತ್ತೀಚೆಗೆ ಸುರಿದ ಮಳೆಯಿಂದ ತ್ಯಾಜ್ಯಯುಕ್ತ ನೀರು ಚರಂಡಿಯಲ್ಲಿ ಹರಿಯದೇ ರಸ್ತೆಯಲ್ಲೇ ಹೆಚ್ಚು ಹರಿದಿದೆ. ಇನ್ನೂ ಹೆದ್ದಾರಿ ನಡುವೆ ವಿದ್ಯುತ್‌ ಕಂಬ ಅಳವಡಿಕೆಗೆ ಸ್ಥಳವಕಾಶ ಬಿಟ್ಟಿದ್ದು, ಇದುವರೆಗೂ ವಿದ್ಯುತ್‌ ಕಂಬ ಅಳವಡಿಸಿಲ್ಲ. ರಾತ್ರಿ ವೇಳೆ ಗಂಜ್‌ ಸರ್ಕಲ್‌ನಿಂದ ಜಿಲ್ಲಾಸ್ಪತ್ರೆಗೆ ತೆರಳುವುದು ಕಷ್ಟದ ಪರಿಸ್ಥಿತಿಯಿದೆ. ರಸ್ತೆ ಮಧ್ಯೆ ಬಿಟ್ಟಿರುವ ಜಾಗದಲ್ಲಿ ಬೆಳಕಿನ ಕೊರತೆಯಿಂದ ಹಲವು ಅಪಘಾತ ನಡೆದ ಉದಾಹರಣೆಯಿವೆ. 

ಇದಲ್ಲದೇ, ಜಿಲ್ಲಾ ಕ್ರೀಡಾಂಗಣ ಸಮೀಪದ ಪೆಟ್ರೋಲ್‌ ಬಂಕ್‌ ಬಳಿ ರಸ್ತೆ ಜೋಡಣಾ ಸಂಪರ್ಕ ಕಲ್ಪಿಸಬೇಕಿದೆ. ಆ ಕಾರ್ಯವೂ ನಡೆದಿಲ್ಲ. ಹಿರೇಹಳ್ಳ ಸಮೀಪದಲ್ಲಿನ ರಸ್ತೆ ಎರಡೂ ಬದಲಿಯಲ್ಲಿ ಮರಂ ಹಾಕಲಾಗುತ್ತಿದೆ. ಆದರೆ ಗಟ್ಟಿಗೊಳಿಸುತ್ತಿಲ್ಲ. ಇಷ್ಟೆಲ್ಲ ಅರಿತಿರುವ ಗುತ್ತಿಗೆದಾರರು ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳಂತೂ ತೆಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ಶಾಸಕ-ಸಂಸದರು ಇಂತಹ ವಿಷಯಗಳ ಕುರಿತು ಯಾವುದೇ ಪ್ರಗತಿ ಪರಿಶೀಲನಾ ಸಭೆಯಲ್ಲೂ ಚರ್ಚೆ ಮಾಡುತ್ತಿಲ್ಲ. ಹೀಗಾಗಿ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಇನ್ನೂ ಗಡಿಯಾರ ಕಂಬ-ಕಾತರಕಿ ರಸ್ತೆಯನ್ನು ಇತ್ತೀಚೆಗಷ್ಟೆ ನಿರ್ಮಿಸಲಾಗಿದೆ. ಆದರೆ ವಿವಿಧ ಭಾಗದಲ್ಲಿ ರಸ್ತೆ ಕಿತ್ತು ಹೋಗಿದೆ. ಕುಡಿಯುವ ನೀರು ಸರಬರಾಜು ಘಟಕದ ಬಳಿ ರಸ್ತೆ ನಿರ್ಮಾಣಕ್ಕೆ ಗುಂಡಿ ತೋಡಲಾಗಿದೆ. ಅಲ್ಲಿಯೂ ಆಮೆಗತಿಯಲ್ಲಿ ಕಾಮಗಾರಿ ನಡೆದಿದೆ.

Advertisement

ಗವಿಮಠ-ಹೂವಿನಾಳ ರಸ್ತೆ ಜೋಡಣಾ ಸಂಪರ್ಕವೂ ನಡೆದಿಲ್ಲ. ರಸ್ತೆಗಳ ಪಕ್ಕ ಚರಂಡಿಗಳನ್ನು ಎತ್ತರ ಮಟ್ಟಕ್ಕೆ ನಿರ್ಮಿಸುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದರೆ, ಯೋಜನೆಯಲ್ಲಿ ಇದ್ದಷ್ಟು ಚರಂಡಿ ನಿರ್ಮಿಸಲಾಗುತ್ತಿದೆ. ಕಡಿಮೆ ನಿರ್ಮಾಣ ಮಾಡಿದರೆ ಬಿಲ್‌ ಆಗುವುದಿಲ್ಲ ಎನ್ನುವ ವೇದನೆ ಗುತ್ತಿಗೆದಾರರಲ್ಲಿ ಕಾಡುತ್ತಿದೆ. ಅಶೋಕ ವೃತ್ತ, ಬಸವೇಶ್ವರ ಸರ್ಕಲ್‌ ಸೇರಿದಂತೆ ತಹಶೀಲ್ದಾರ್‌ ಸರ್ಕಲ್‌ನಲ್ಲೂ ಜೋಡಣಾ ರಸ್ತೆ ಕಾಮಗಾರಿ ನಡೆಯುತ್ತಿಲ್ಲ. ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ಹಲವರು ರಸ್ತೆಗಳ ಅವಸ್ಥೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿ ಬಿಟ್ಟು ಅಭಿವೃದ್ಧಿ ಅದ್ವಾನ ತೋರಿಸುತ್ತಿದ್ದಾರೆ.

ಕೊಪ್ಪಳ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ನಗರದ ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕುರಿತು ‘ಉದಯವಾಣಿ’ ಇಂದಿನಿಂದ ಸರಣಿ ಲೇಖನ ಪ್ರಕಟಿಸುತ್ತಿದೆ.

ಕೊಪ್ಪಳ ಜಿಲ್ಲೆಯಾಗಿ 20 ವರ್ಷ ಗತಿಸಿವೆ. ಆದರೂ ಅಭಿವೃದ್ಧಿ ಕಾಣುತ್ತಲೇ ಇಲ್ಲ. ಚರಂಡಿ, ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸುತ್ತಿಲ್ಲ. ಎಲ್ಲವೂ ಆಮೆಗತಿಯಲ್ಲಿ ನಡೆಯುತ್ತಿವೆ. ಸಚಿವರು, ಶಾಸಕರು, ಸಂಸದರು ನಗರವನ್ನೊಮ್ಮೆ ಕಾಲ್ನಡಿಗೆಯಲ್ಲಿ ಸುತ್ತಾಡಿ ವೀಕ್ಷಣೆ ಮಾಡಲಿ ಅವರಿಗೆ ಅಭಿವೃದ್ಧಿಯ ಪರಿಸ್ಥಿತಿ ಅರ್ಥವಾಗಲಿದೆ.
. ಬಸವರಾಜ ಹುಳುಕಣ್ಣನವರ್‌,
   ನಗರ ನಿವಾಸಿ.

ಕೊಪ್ಪಳದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ ಆರೇಳು ವರ್ಷ ಕಳೆದರೂ ಪೂರ್ಣಗೊಳ್ಳುತ್ತಿಲ್ಲ. ರಸ್ತೆ ಪಕ್ಕದ ಗಿಡಗಳನ್ನು ಕಡಿದು ಹಾಕಲಾಗಿದೆ. ಕಾಮಗಾರಿಗೆ ವೇಗ ಪಡೆಯುತ್ತಿಲ್ಲ. ಮಳೆಗಾಲದಲ್ಲಂತೂ ಜನರ ಸಂಚಾರಕ್ಕೆ ತುಂಬ ತೊಂದರೆ ಉಂಟಾಗುತ್ತಿದೆ. ಕ್ಷೇತ್ರದ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಬೇಕಿದೆ.
. ಮಹಾಂತೇಶ ಮಲ್ಲನಗೌಡರ್‌,
   ಹಿರಿಯ ಸಾಹಿತಿ.

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next