Advertisement

ಯಾರ್ಯಾರು ಹೇಗೆ ಅಂತಾ ಈಗ ತಿಳಿಯಿತು…

11:24 AM Apr 21, 2020 | mahesh |

(ಲಾಕ್‌ಡೌನ್‌ ಆಗಿರುವ ಈ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಮ್‌ನ ಮೊದಲ ಅನುಭವ ಹೇಗಿತ್ತು?- ಅನ್ನೋದನ್ನು ನೀವೂ ಬರೆಯಬಹುದು)

Advertisement

“ರೀ… ಮಗೂನ ಸ್ವಲ್ಪ ನೋಡ್ಕೊಳ್ರಿ- ಅಂದಳು ಹೆಂಡತಿ. ಅವಳ ಮಾತಿನ ಹಿಂದೆ ಮನವಿಯ ಭಾವ ಇರಲಿಲ್ಲ. ಆರ್ಡರ್‌ ಇತ್ತು! ಎದುರಿಗಿದ್ದ ಕ್ಯಾಲೆಂಡರ್‌ ನೋಡಿದೆ. ವರ್ಕ್‌ ಫ್ರಂ ಹೋಂ ಶುರು ಮಾಡಿ, ಆಗಲೇ 15 ದಿನ ಆಗಿತ್ತು. ಹೆಂಡತಿಗೆ ನನ್ನ ಮೇಲೆ ವಿಚಿತ್ರವಾದ ಸಿಟ್ಟು. ಏಕೆಂದರೆ, ವರ್ಕ್‌ ಫ್ರಂ ಹೋಮ್‌ ಅಂದರೆ, ಗಂಡ ಮನೆಯಲ್ಲೇ ಇರ್ತಾನೆ. ಇರೋದು ಅಂದರೆ ಹೇಗೆ? ಪೂರ್ತಿ ಬಿಡುವಾಗಿ ಕೂತಿರುತ್ತಾನೆ. ಆಗಾಗ ಮೆಲ್ಲಗೆ, ಅಲ್ಲಿ- ಇಲ್ಲಿ ಹೋಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಟೈಂಗೆ ಸರಿಯಾಗಿ ಊಟ, ತಿಂಡಿ ಬೇಯಿಸಿ ಹಾಕುವ ಒತ್ತಡ ಇಲ್ಲ ಅಂತೆಲ್ಲ ಲೆಕ್ಕ ಹಾಕಿದ್ದಳು.

ಪಾಪ, ಅವಳು ಊಹಿಸಿದಂತೆ ಏನೂ ನಡೆಯುತ್ತಿರಲಿಲ್ಲ. ನನಗೋ, ವರ್ಕ್‌ ಫ್ರಂ ಹೋಂ ಅಂತ ಹೇಳಿಯೇ, ಬಾಕಿ ಇದ್ದ ಹಳೇ ಫೈಲ್‌ಗಳನ್ನೆಲ್ಲ ಬಾಸ್‌ ನನ್ನ ತಲೆಗೆ ಕಟ್ಟಿ ಹೋಗಿದ್ದರು. ಅಕೌಂಟೆಂಟ್‌ ಕೆಲಸ ಅಂದರೆ ಸುಮ್ಮನೆ ಅಲ್ಲ. ಒಂಥರಾ ಪಂಕ್ಚರ್‌ ಹಾಕ್ತಾರಲ್ಲ; ಅಂಥದೇ ಕೆಲಸ ನಮ್ಮದು. ಯಾರ್ಯಾರೋ ಮಾಡಿರುವ ಹಾದಿ ತಪ್ಪಿದ ವ್ಯವಹಾರಕ್ಕೆ ಪಂಕ್ಚರ್‌ ಹಾಕಬೇಕು, ಸರ್ಕಾರದ ಕಡೆ ಟ್ಯಾಕ್ಸ್ ಸೋರಿಹೋಗದ ಹಾಗೆ.

ಅನುಮಾನ ಬಂದರೆ, ಕ್ಲೈಂಟ್ ಗೆ ಫೋನ್‌ ಮಾಡಬೇಕು. ಮಾಹಿತಿ ತಗೊಂಡು, ಮತ್ತೆ ಬೇರೆ ದಾರಿ ಹುಡುಕಬೇಕು. ಎಷ್ಟೋ ಸಲ- “ಸ್ವಲ್ಪ ಹೊತ್ತು ಮಕ್ಕಳನ್ನು ನೋಡ್ಕೊಳ್ಳಿ’ ಎಂದು ನನ್ನ ಹೆಂಡತಿ ಹೇಳುವ ಹೊತ್ತಿಗೇ, ಅತ್ಲಾ ಕಡೆಯಿಂದ ಕ್ಲೈಂಟ್ ಫೋನ್‌ ಮಾಡಿಬಿಡುತ್ತಿದ್ದ. ಅಲ್ಲಿಗೆ, ಅವಳ ಲೆಕ್ಕಾಚಾರಗಳು ಹುಸಿಯಾಗುತ್ತಿದ್ದವು. ಸಹಜವಾಗಿಯೇ ಆಕೆ ಸಿಟ್ಟಾಗುತ್ತಿದ್ದಳು. ನಿಜ ಹೇಳಬೇಕೆಂದರೆ, ವರ್ಕ್‌ ಫ್ರಂ  ಹೋಮ್‌ ಆದಮೇಲೆ, ನನಗೆ ನನ್ನ ಬಾಸ್‌ನ ಹಾಗೂ ಹೆಂಡತಿಯ ಇನ್ನೊಂದು ಮುಖದ ದರ್ಶನವಾಯಿತು. ಹೆಂಡತಿಯದು ಬಿಡಿ. ಅದು ನಿರೀಕ್ಷಿತ ಫ‌ಲಿತಾಂಶ.
ಆದರೆ, ನಮ್ಮ ಬಾಸ್‌ ಮೊದಲು ಹೀಗಿರಲಿಲ್ಲ. ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದವರು, ಇದ್ದಕ್ಕಿದ್ದಂತೆ ನನ್ನನ್ನೂ ಕೋವಿಡ್-19 ಪೇಶೆಂಟ್‌ನಂತೆ ಟ್ರೀಟ್‌ ಮಾಡುತ್ತಿರುವುದರ ಉದ್ದೇಶ ತಿಳಿಯದಾಗಿದೆ.

ದಿನಕ್ಕೆ 10 ಫೈಲ್‌ ಕ್ಲಿಯರ್‌ ಮಾಡಲೇಬೇಕು ಅಂತ ಆಜ್ಞೆ ಮಾಡಿದ್ದಾರೆ. ಈ ಹತ್ತು ಫೈಲ್‌ ಕ್ಲಿಯರ್‌ ಮಾಡಬೇಕು ಅಂದರೆ, ದಿನಕ್ಕೆ 10-12 ಗಂಟೆ ಕೆಲಸ ಮಾಡಬೇಕು. ಅದೇ
ಆಫಿಸಲ್ಲಾಗಿದ್ದರೆ, 9 ಗಂಟೆ ಕೆಲಸ. ಅಲ್ಲಿಗಿಂತ ಎರಡು ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಿದರೂ, ಬಾಸ್‌ಗೆ ತೃಪ್ತಿಯೇ ಇಲ್ಲ. ಅವರದ್ದು ಅತೃಪ್ತಿಯೋ, ಅನುಮಾನವೋ ತಿಳಿಯಲು ಆಗುತ್ತಿಲ್ಲ. ಇವೆಲ್ಲ ನನ್ನ ಸಮಸ್ಯೆ. ಇದನ್ನು ಹೆಂಡತಿಗೆ ಹೇಳುವುದು ಹೇಗೆ? ಲಾಕ್‌ಡೌನ್‌ ಮತ್ತೆ ಮುಂದಕ್ಕೆ ಹೋದದ್ದರಿಂದ, ಮತ್ತೆ ಸಂಕಟದ ಜೊತೆಗೇ ಬದುಕು ವಂತಾಗಿದೆ. ಹೆಂಡತಿ ಈಗ ಹೆಚ್ಚೇನೂ ಕಿರಿಕಿರಿ ಮಾಡುತ್ತಿಲ್ಲ. ಅವಳಿಗೆ ಗೊತ್ತಾಗಿದೆ, ಗಂಡ ಎಲ್ಲೇ ಕೆಲಸ ಮಾಡಿದರೂ ಇಷ್ಟೇ ಅಂತ. ಅದಕ್ಕೇ ನಾನೊಂದು ಐಡಿಯಾ ಮಾಡಿದ್ದೇನೆ. ಒಂದಷ್ಟು ಕೆಲಸಗಳನ್ನು ನಡುರಾತ್ರಿಯೇ ಮುಗಿಸಿಟ್ಟು, ಬೆಳಗ್ಗೆ ಮಕ್ಕಳನ್ನು ಆಟವಾಡಿಸುತ್ತೇನೆ. ತರಕಾರಿ ಹೆಚ್ಚಿ ಕೊಡುತ್ತಿದ್ದೇನೆ. ಈಗ ಅವಳೂ, ನನ್ನ ವರ್ಕ್‌ ಫ್ರಂ ಹೋಂಗೆ ಹೊಂದಿಕೊಂಡು ಬಿಟ್ಟಿದ್ದಾಳೆ. ಮೊನ್ನೆ ಪ್ರಧಾನಿಗಳು, ಮೇ. 3 ರ ತನಕ ಲಾಕ್‌ಡೌನ್‌ ಮುಂದುವರಿಯಲಿದೆ ಅಂತ ಘೋಷಣೆ ಮಾಡಿದಾಗ. ತಿಂಗಳು ಪೂರ್ತಿ ಮನೆಯಲ್ಲೇ ಇರ್ತೀರಲ್ಲ… ಅನ್ನುತ್ತಾ ನಕ್ಕಳು ಹೆಂಡತಿ. ಅವಳ ಮಾತಲ್ಲಿ ಖುಷಿ ಇತ್ತು
ಅನ್ನೋದೇ ನನಗೆ ನೆಮ್ಮದಿ ತಂದ ವಿಚಾರ.

Advertisement

ಸೀತಾಪತಿ ಎಂ.ಎ, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next