ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಮ್ ಎಂದು ನಿಮ್ಮ ಊರಿನಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಬರುವ ಸಂಬಳಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಇಂಥ ಕ್ರಮ ಜಾರಿಗೆ ತರುವ ಬಗ್ಗೆ ಸೇವಾ ಕ್ಷೇತ್ರದ ಕಂಪೆನಿಗಳು ಗಂಭೀರವಾಗಿ ಯೋಚಿಸುತ್ತಿವೆ.
ವರ್ಕ್ ಫ್ರಂ ಹೋಮ್ ನಿಯಮ ಜಾರಿ ಕುರಿತ ಕರಡು ನಿಯಮಗಳಿಗೆ ಸಂಬಂಧಿಸಿ ಕೇಂದ್ರ ಕಾರ್ಮಿಕ ಸಚಿವಾಲಯದ ಜತೆ ಸೇವಾ ಕ್ಷೇತ್ರದ ಕಂಪೆನಿಗಳ ಪ್ರತಿನಿಧಿಗಳು ಸಮಾಲೋಚನೆ ನಡೆಸಿದ್ದಾರೆ. ವಿಶೇಷವಾಗಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ನೆಲೆಸಿಕೊಂಡು ಕೆಲಸ ಮಾಡುವವರಿಗೆ ವೇತನ ಕಡಿತ ಉಂಟಾಗುವ ಸಾಧ್ಯತೆಗಳಿವೆ.
ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯೋಗಗಳು, ವಿತ್ತೀಯ ಸಂಸ್ಥೆಗಳ ಸೇವೆಗಳು, ಇತರ ವೃತ್ತಿಪರ ಕ್ಷೇತ್ರಗಳ ಉದ್ಯೋಗಿ ಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಹೊಂದಿದ್ದಲ್ಲಿ ಅವರ ವೇತನದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಶೇ.25ರಷ್ಟು ಉಳಿತಾಯ: ವೈ ಫೈ ವೆಚ್ಚ ಮತ್ತು ಇತರ ಮೂಲ ವೆಚ್ಚ, ಸಾರಿಗೆ ಭತ್ತೆಯನ್ನು ಉದ್ಯೋಗಿಗಳಿಗೆ ನೀಡದೆ ಇರುವ ಸಾಧ್ಯತೆಗಳು ಇವೆ. ಕೇಂದ್ರ ಸರಕಾರ ಎ.1ರಿಂದ ಕಾರ್ಮಿಕ ಸಂಹಿತೆ ಜಾರಿಗೊಳಿಸಲು ಉದ್ದೇಶಿಸಿದೆ. ಹೀಗಾಗಿ ಆ ದಿನದಿಂದಲೇ ಅದನ್ನು ಅನುಷ್ಠಾನ ಗೊಳಿಸುವ ಬಗ್ಗೆ ಕಂಪೆನಿಗಳು ಮುಂದಾಗಿವೆ. ಹೀಗೆ ಮಾಡಿ ದರೆ ಕಂಪೆನಿಗಳಿಗೆ ಶೇ.20-25ರಷ್ಟು ವೆಚ್ಚದಲ್ಲಿ ಉಳಿತಾಯ ಆಗಲಿದೆ. ಕಂಪೆನಿಗಳು ಎರಡು ಮತ್ತು ಮೂರನೇ ಹಂತದ ನಗರಗಳ ಲ್ಲಿಯೇ ತಮ್ಮ ಉದ್ಯೋಗಿಗಳನ್ನು ನೆಲೆಸುವಂತೆ ಮಾಡಲು ಉದ್ದೇಶಿಸಿವೆ. ಅದಕ್ಕೆ ಪೂರಕವಾಗಿ ಶೇ.23ರಷ್ಟು ಕಂಪನಿಗಳು ವೇತನದಲ್ಲಿಯೂ ಪರಿಷ್ಕರಣೆ ಮಾಡಲು ಚಿಂತನೆ ನಡೆಸುತ್ತಿವೆ ಎಂದು ಈ ಕುರಿತು ಸಮೀಕ್ಷೆ ನಡೆಸಿರುವ ಆ್ಯನ್ ಇಂಡಿಯಾದ ಹಿರಿಯ ಅಧಿಕಾರಿ ವಿಶಾಲ್ ಗ್ರೋವರ್ ತಿಳಿಸಿದ್ದಾರೆ.