ಬೆಂಗಳೂರು: ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿರುವುದು ದೃಢಪಟ್ಟ ಬೆನ್ನಲ್ಲೇ ನಗರದ ವಿವಿಧ ಐಟಿ-ಬಿಟಿ ಕಂಪನಿಗಳು ಮತ್ತು ಉದ್ಯೋಗಿಗಳಲ್ಲಿ “ವರ್ಕ್ ಫ್ರಾಮ್ ಹೋಂ’ (ಮನೆಯಿಂದಲೇ ಕೆಲಸ) ಟ್ರೆಂಡ್ ಶುರುವಾಗಿದೆ.
ಅತ್ತ ಕೊರೊನಾ ವೈರಸ್ ಖಾತ್ರಿಯಾಗುತ್ತಿದ್ದಂತೆ ಇತ್ತ ಕೆಲ ಐಟಿ ಕಂಪನಿಗಳು ಮನೆಯಿಂದಲೇ ಕಾರ್ಯನಿರ್ವಹಣೆಗೆ ಸೂಚಿಸಿದ್ದಾರೆ. ಕೆಲವೆಡೆ ಸ್ವತಃ ಉದ್ಯೋಗಿಗಳು ಸ್ವಯಂಪ್ರೇರಿತವಾಗಿ “ವರ್ಕ್ ಫ್ರಾಮ್ ಹೋಂ’ಗೆ ಅನುಮತಿ ನೀಡು ವಂತೆ ತಮ್ಮ ಮೇಲಧಿಕಾರಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಇನ್ನು ಹಲವೆಡೆ ಈ ರೀತಿ ವದಂತಿ ಹಬ್ಬಿಸಲಾಗುತ್ತಿದೆ. ಇದು ಕಂಪನಿಗಳ ಸಾಫ್ಟ್ವೇರ್‌ಗಳ ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿದೆ.
ನಗರದಲ್ಲಿ ನೂರಾರು ಐಟಿ ಕಂಪನಿಗಳಿದ್ದು, ಲಕ್ಷಾಂತರ ಜನ ಅಲ್ಲಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ ಬಹುತೇಕ ವಿದೇಶಿ ಕಂಪನಿಗಳೊಂದಿಗೆ ಅವರ ಒಡನಾಟ ಇರುತ್ತದೆ. ಆದರೆ, ತಮ್ಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗೆ ಮಾರಣಾಂತಿಕ ಕಾಯಿಲೆ ಕಾಣಿಸಿ ಕೊಂಡಿದ್ದರಿಂದ ಆತಂಕದಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದಾರೆ. “ನನಗೆ ದಿಢೀರ್ ಅನಾರೋಗ್ಯ ಸಮಸ್ಯೆ ಕಾಣಿಸಿದ್ದು, ಆರೋಗ್ಯ ತಪಾಸಣೆ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕೆಲಸ ಮಾಡಲು ಅವಕಾಶ ನೀಡಬೇಕು’ ಎಂದು ಸಂದೇಶ ಕಳುಹಿಸಿ ರಜೆ ಪಡೆಯುತ್ತಿದ್ದಾರೆ.
ದಿಢೀರ್ ರಜೆ ಸಿಗಿದ್ದವರು ಮನೆಯಿಂದ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಈ ಮಧ್ಯೆ ಕಂಪನಿಗಳು ಕಾದುನೋಡುವ ತಂತ್ರ ಅನು ಸರಿಸುತ್ತಿದ್ದಾರೆ. ಮುಂದಿನ ಮೂರ್‍ನಾಲ್ಕು ದಿನಗಳ ಬೆಳವಣಿಗೆಗಳನ್ನು ಆಧರಿಸಿ ಸಾಧ್ಯವಾದರೆ, ಗಂಭೀರ ಸ್ವರೂಪ ಪಡೆದುಕೊಂಡರೆ ಸಂಪೂರ್ಣ ವಾಗಿ “ವರ್ಕ್ ಫ್ರಾಮ್ ಹೋಂ’ನತ್ತ ಮುಖಮಾಡಿ ದರೂ ಅಚ್ಚರಿ ಇಲ್ಲ ಎಂದು ವೈಟ್‌ಫೀಲ್ಡ್ ಕಂಪನಿ ಯೊಂದರ ಹಿರಿಯ ಉದ್ಯೋಗಿ ಅಭಿಲಾಷ್ ತಿಳಿಸಿದರು.
“ಈಗಲೇ ನನಗೆ ರಜೆ ಕೊಟ್ಟರೂ ಹೋಗಲು ತುದಿಗಾಲಲ್ಲಿ ನಿಂತಿದ್ದೇನೆ. ಆದರೆ, ರಜೆ ಸಿಗುತ್ತಿಲ್ಲ. ಲಿಫ್ಟ್, ವಾಷ್‌ರೂಂ, ಫ್ಯಾನ್ ಬಟನ್ ಕಚೇರಿಯಲ್ಲಿ ಯಾವುದೇ ವಸ್ತುವನ್ನು ಮುಟ್ಟಲಿಕ್ಕೂ ಭಯ ಆಗುತ್ತಿದೆ. ಸ್ನೇಹಿತರು ಕೈಕುಲುಕಲು ಬಂದರೂ ಹಿಂದೇಟು ಹಾಕುವಂತಾಗಿದೆ. ಹಾಗಾಗಿ, ಬ್ಯಾಗ್‌ನಲ್ಲಿ ಕೈತೊಳೆಯುವ ಲಿಕ್ವಿಡ್ (ಸ್ಯಾನಿಟೈಜರ್) ಇಟ್ಟುಕೊಂಡು ಹೋಗುತ್ತಿದ್ದೇನೆ’ ಎಂದು ಇದೇ ವೇಳೆ ಅವರು ಅಲವತ್ತುಕೊಂಡರು.
ಸಂಪರ್ಕ ಕೊಂಡಿ ಸ್ಥಗಿತ?: ಈ ಮಧ್ಯೆ ಇಲ್ಲಿನ ವಿವಿಧ ಐಟಿ-ಬಿಟಿ ಕಂಪನಿಗಳು, ಕೈಗಾರಿಕೆಗಳ ಪ್ರತಿನಿಧಿಗಳು ಭಾಗಿಯಾಗಬೇಕಿದ್ದ ವಿದೇಶಗಳಲ್ಲಿನ ವ್ಯವಹಾರ ಉದ್ದೇಶಿತ ಕಾನ್ಫರೆನ್ಸ್‌ಗಳು ರದ್ದಾಗಿವೆ. ಅದೇ ರೀತಿ, ವಿದೇಶಗಳಿಂದ ಇಲ್ಲಿಗೆ ಬರಬೇಕಾದ ಪ್ರತಿನಿಧಿಗಳ ಸಂಖ್ಯೆಯೂ ವಿರಳವಾಗಿದೆ. ಅಲ್ಲದೆ, ಸಿಂಗಪುರ, ಚೀನಾ ಸೇರಿದಂತೆ ಹಲವು ನೆರೆ ದೇಶಗಳಲ್ಲಿ ಕೊರೊನಾ ವೈರಸ್ ಪರಿಣಾಮ ಉದ್ಯಮ ವಲಯ ಮಖಾಡೆ ಮಲಗಿದೆ. ಹಾಗಾಗಿ, ಸಾಫ್ಟ್ವೇರ್‌ಗಳ ರಫ್ತಿನಲ್ಲೂ ತಕ್ಕಮಟ್ಟಿಗೆ ಇಳಿಮುಖ ಕಂಡುಬಂದಿದೆ ಎಂದು ಮತ್ತೂಂದು ಕಂಪನಿಯ ಉದ್ಯೋಗಿ ಯೋಗೇಶ್ ಹೇಳಿದರು.
* ವಿಜಯಕುಮಾರ್ ಚಂದರಗಿ