ಬೆಂಗಳೂರು : ಕೋವಿಡ್ ಹಾಗೂ ಒಮಿಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಬಿಗಿ ನಿಯಮ ಜಾರಿಗೊಳಿಸಿದ್ದರೂ, ಸರಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯವಾಗಿದೆ.
ಸರಕಾರಿ ನೌಕರರಿಗೆ ವರ್ಕ್ ಫ್ರಂ ಹೋಂ ಸೂತ್ರ ಈ ಬಾರಿ ಅನ್ವಯವಾಗುವುದಿಲ್ಲ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶದಲ್ಲಿ ಸ್ಪಷ್ಟವಾಗಿದೆ. ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವೃಂದದ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿ ದಿನ ಕಚೇರಿಗೆ ಹಾಜರಾಗಲೇಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅನ್ಯ ಇಲಾಖೆಯಲ್ಲಿ ಮುಖ್ಯಸ್ಥರು ಹಾಗೂ ಗ್ರೂಪ್ ಎ ದರ್ಜೆ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಬಿ, ಸಿ, ಡಿ ದರ್ಜೆ ಸಿಬ್ಬಂದಿ ೫೦ : ೫೦ ರೊಟೇಶನ್ ಆಧಾರದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.ದೃಷ್ಟಿಹೀನ, ಅಂಗವಿಕಲ, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವವರಿಗೆ ಮಾತ್ರ ಕಚೇರಿಗೆ ಬಂದು ಕರ್ತವ್ಯ ನಿರ್ವಹಿಸದೇ ಇರುವುದಕ್ಕೆ ವಿನಾಯಿತಿ ನೀಎಲಾಗಿದೆ ಎಂದು ಸರಕಾರಿ ಆದೇಶ ಸ್ಪಷ್ಟಪಡಿಸಿದೆ.
ಎರಡು ಡೋಸ್ ಕಡ್ಡಾಯ
ಇನ್ನು ವಿಧಾನಸೌಧ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಗೊಳಿಸಲಾಗಿದೆ. ಜತೆಗೆ ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ಕೆಲ ನಿರ್ಬಂಧ ವಿಧಿಸಲಾಗುತ್ತದೆ.