Advertisement

ಗದೆಯಲ್ಲಿ ನಾಟಿಯಿಂದ ಕಟಾವಿನವರೆಗೆ ಮಕ್ಕಳದ್ದೇ  ಕೆಲಸ!

04:30 PM Oct 26, 2017 | Team Udayavani |

ಕಲ್ಲಡ್ಕ: ಶಿಕ್ಷಣದೊಂದಿಗೆ ಕೃಷಿಪಾಠ. ತಾವೇ ದುಡಿದು ತಿನ್ನುವುದಕ್ಕೆ ಎಳವೆಯಿಂದಲೇ ಪ್ರೇರಣೆ. ಆ ಮೂಲಕ ವ್ಯವಸಾಯದಿಂದ ವಿಮುಖರಾಗುತ್ತಿರುವ ಯುವ ಜನಾಂಗಕ್ಕೆ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸುವ ಕೈಂಕರ್ಯ. ಇದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಸುಮಾರು 8 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕೃಷಿ ಪಾಠದ ವೈಶಿಷ್ಟ್ಯ !

Advertisement

ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ತಮ್ಮ ಕೃಷಿ ಸಂಘದ ಮೂಲಕ ಸುಮಾರು ಎಂಟು ವರ್ಷಗಳಿಂದ ಭತ್ತ ನಾಟಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆಗೆ ಸೇರಿದ ಸುಮಾರು ಎರಡು ಎಕರೆ ಭೂಮಿಯೇ ಇವರ ಕೃಷಿಭೂಮಿ. ಅಲ್ಲದೆ ಶಾಲೆಯ ಮಧ್ಯಾಹ್ನದ ಊಟಕ್ಕೆ ಕೂಡ ಮಕ್ಕಳು ನೆರವಾಗುತ್ತಿದ್ದಾರೆ.

ಪ್ರಸ್ತುತ ವರ್ಷ ಮಕ್ಕಳೇ ನೇಜಿ ನಾಟಿ ಮಾಡಿದ ಭತ್ತ ಕೊಯ್ಲಿಗೆ ಬಂದಿದ್ದು, ಅ. 21ರಂದು ವಿದ್ಯಾಕೇಂದ್ರದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರು ಕೊಯ್ಲು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮುಂದೆ ಕಟಾವು, ಭತ್ತ ವಿಭಜಿಸುವ ಕೆಲಸವನ್ನು ಮಕ್ಕಳೇ ಮಾಡಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ, ಮಾತೃ ಭಾರತಿ ಸಂಘಟನೆಯ ತಾಯಂದಿರು, ಶಿಕ್ಷಕರು ಮಕ್ಕಳಿಗೆ ಸಹಕರಿಸಲಿದ್ದಾರೆ.

ವಿಶೇಷವೆಂದರೆ ಯಾವುದೇ ರಾಸಾಯನಿಕ ಬಳಸದೆ ಸಂಪೂರ್ಣ ಸಾವಯವ ಪದ್ಧತಿ ಮುಖಾಂತರ ಮಕ್ಕಳು ನಾಟಿ
ಕಾರ್ಯ ಮಾಡಿದ್ದರು. ಅಲ್ಲದೆ, ಕಟಾವು ಮಾಡಿದ ಭತ್ತವನ್ನು ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕಾಗಿಯೂ ಬಳಸುತ್ತಾರೆ.

ಈ ಗದ್ದೆಯಲ್ಲಿ ಕೃಷಿ ಚಟುವಟಿಕೆಯ ಕುರಿತು ಪ್ರತಿ ವರ್ಷ ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗುತ್ತದೆ. ಅಲ್ಲದೇ
ಮಳೆಗಾಲದ ಆರಂಭದಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯುವ ಸಂದರ್ಭದಲ್ಲಿ ಮಕ್ಕಳಿಗಾಗಿ ಕೆಸರುಗದ್ದೆ ಓಟ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದು ಶಿಕ್ಷಕರು ಹೇಳುತ್ತಾರೆ.

Advertisement

ಶಾಲೆಯ ಮಧ್ಯಾಹ್ನದ ಊಟಕ್ಕೆ ಬಳಕೆ 
ಮಕ್ಕಳೇ ನಾಟಿ ಮಾಡಿ, ಕಟಾವು ಮಾಡಿದ ಭತ್ತವನ್ನು ಶಾಲೆಯ ಮಧ್ಯಾಹ್ನದ ಊಟಕ್ಕೆ ಉಪಯೋಗಿಸಿದಂದು ಎಲ್ಲ ಮಕ್ಕಳ ಎದುರಿನಲ್ಲಿ ಅದನ್ನು ತಿಳಿಸುವ ಕೆಲಸವನ್ನು ಶಾಲಾ ಆಡಳಿತ ಮಂಡಳಿ ಮಾಡುತ್ತಿದೆ. ಶಾಲೆಯಲ್ಲೇ ಮಕ್ಕಳೇ ಬೆಳೆದ ಭತ್ತದಿಂದ ತಯಾರಿಸಿದ ಅನ್ನವನ್ನು ಮಕ್ಕಳು ಖುಷಿಯಿಂದಲೇ ಊಟ ಮಾಡುತ್ತಾರೆ. ಅಲ್ಲದೆ ಅದು ಕೃಷಿ ಕಡೆಗೆ ಅವರು ಆಸಕ್ತಿ ಬೆಳೆಸಿಕೊಳ್ಳಲು ಪ್ರೇರಣೆ ನೀಡಿದಂತೆಯೂ ಆಗುತ್ತದೆ.
ರವಿರಾಜ್‌ ಕನಂತೂರು, ಮುಖ್ಯ ಶಿಕ್ಷಕ, ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next