ರೊಟ್ಟಿ… ಉತ್ತರ ಕರ್ನಾಟಕದ ಜನರ ಬಹುಮುಖ್ಯ ಆಹಾರ. ಊಟ ಅಂದ್ಮೇಲೆ ಜೋಳದ ರೊಟ್ಟಿ, ಶೇಂಗಾ ಹಿಂಡಿ, ಕಾಳು ಕಡಿ ಹಾಕಿ ಮಾಡಿದ ರುಚಿಕಟ್ಟಾದ ಪಲ್ಯ ಇರಲೇಬೇಕು. ಅಲ್ಲಿನವರ ಗಟ್ಟಿತನಕ್ಕೂ, ರೊಟ್ಟಿಗೂ ನಂಟಿದೆ ಅಂದರೂ ತಪ್ಪಲ್ಲ. ಇಂತಿಪ್ಪ ಜನರು ಬೇರೆ ಊರಿಗೆ ಹೋಗಿ ನೆಲೆಸಿದರೂ, ಅವರ ಆಹಾರದಲ್ಲಿ ಹೆಚ್ಚಿನ ಬದಲಾವಣೆ ಕಾಣದು. ರಾಜಧಾನಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಖಾನಾವಳಿಗಳೇ ಈ ಮಾತಿಗೆ ಸಾಕ್ಷಿ.
ಬೆಂಗಳೂರು, ಅನಿವಾಸಿಗಳೇ ಬಹು ಸಂಖ್ಯೆಯಲ್ಲಿ ನೆಲೆಸಿರುವ ಊರು. ಪರ ಊರುಗಳಿಂದ ಬಂದವರೆಲ್ಲ ತಂತಮ್ಮ ಊರಿನ ತುಣುಕನ್ನು ಇಲ್ಲಿ ಬೆಳೆಸಿದ್ದಾರೆ. ಹಾಗೆ, ರೊಟ್ಟಿ ಬಡಿಯುವ ಟಪ್ ಟಪ್ ಸದ್ದು ಕೂಡಾ ಮಹಾನಗರದ ಗದ್ದಲ-ಗೌಜಿಯೊಳಗೆ ಬೆರೆತು ಹೋಗಿದೆ. ಅದರಲ್ಲೂ ವಿಜಯನಗರದ ಹೋಟೆಲ್‌ಗಳು ಬಿಸಿ ಬಿಸಿ ರೊಟ್ಟಿಗೆ ಬಹಳ ಫೇಮಸ್. ಅಮ್ಮನ ಕೈ ರುಚಿಯನ್ನು ನೆನಪಿಸುವ ಆ ರೊಟ್ಟಿಗಳನ್ನು ಮಾಡುವವರು ಯಾರು?
ಅವರೆಲ್ಲ ಎಲ್ಲಿಂದ ಬಂದವರು? ದಿನಕ್ಕೆ ಎಷ್ಟು ರೊಟ್ಟಿ ತಟ್ಟುತ್ತಾರೆ ಅಂತ ಕುತೂಹಲದಿಂದ, ಅಲ್ಲಿನ ಹೋಟೆಲ್‌ಗಳ ಅಡುಗೆಮನೆ ಹೊಕ್ಕಾಗ, ಮೈ-ಕೈ ಎಲ್ಲಾ ಹಿಟ್ಟು ಮಾಡಿಕೊಂಡು, ರೊಟ್ಟಿ ಬಡಿಯುವುದರಲ್ಲಿ ತೊಡಗಿದ್ದ ಹೆಂಗಸರು ಮಾತಿಗೆ ಸಿಕ್ಕಿದರು. ಅವರಲ್ಲಿ ಹೆಚ್ಚಿನವರು ಕಲಬುರ್ಗಿ ಜಿಲ್ಲೆಯವರು. ರೊಟ್ಟಿ ತಟ್ಟುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಈ ಮಹಿಳೆಯರು, ದಿನಕ್ಕೆ 100-200 ರೊಟ್ಟಿಗಳನ್ನು ತಟ್ಟುತ್ತಾರಂತೆ.
ಮದುವೆಯಾದ ನಂತರ ಇಲ್ಲಿಗೆ ಬಂದು ನೆಲೆಸಿರುವವರು ಕೆಲವರಾದರೆ, ಉದ್ಯೋಗ ನಿಮಿತ್ತ ಬೆಂಗಳೂರಿನ ಹೋಟೆಲ್ ಸೇರಿದವರು ಹಲವರು. ಬಡತನದ ಕಾರಣದಿಂದ ಓದನ್ನು ಮೊಟಕುಗೊಳಿಸಿದ ಹಲವು ಹುಡುಗಿಯರಿಗೀಗ, ಅಮ್ಮ ಕಲಿಸಿದ ರೊಟ್ಟಿ ತಟ್ಟುವ ಕಲೆಯೇ ಬದುಕಿನ ದಾರಿಯಾಗಿದೆ. ಇಲ್ಲಿನ ಪ್ರತಿ ಹೋಟೆಲ್‌ನಲ್ಲಿ ದಿನಕ್ಕೆ 400-500 ರೊಟ್ಟಿಗಳು ತಯಾರಾಗುತ್ತವೆ. ಒಂದು ರೊಟ್ಟಿ ತಟ್ಟಲು 2-3 ನಿಮಿಷ ಸಾಕು.
ಬೆಳಗ್ಗೆ 11- 3 ಗಂಟೆವರೆಗೆ ಅವಿರತವಾಗಿ ದುಡಿದರೆ, ಅವರ ದಿನದ ಕೆಲಸ ಮುಗಿದಂತೆ. ಅಷ್ಟೇನಾ, ಬಹಳ ಸುಲಭದ ಕೆಲಸ ಅಂದುಕೊಳ್ಳಬೇಡಿ! ರೊಟ್ಟಿ ತಿನ್ನುವುದೇನೋ ಸುಲಭ. ಆದರೆ, ತಟ್ಟುವುದು ಅಷ್ಟು ಸುಲಭದಲ್ಲ. ರೊಟ್ಟಿ ಸುಡುವಾಗ ಕೈ ಸುಟ್ಟುಕೊಳ್ಳುವುದು, ರೊಟ್ಟಿ ತಟ್ಟಿ ತಟ್ಟಿ ಕೈಗಳಲ್ಲಿ ಗುಳ್ಳೆ ಎದ್ದು, ಚರ್ಮ ಸುಲಿಯುವುದು, ಹೆಚ್ಚು ಹೊತ್ತು ಕುಳಿತೇ ಇರುವ ಕಾರಣದಿಂದ ಬೆನ್ನು-ಭುಜದಲ್ಲಿ ಕಾಣಿಸಿಕೊಳ್ಳುವ ನೋವಿನ ಕಷ್ಟ ಅನುಭವಿಸಿದವರಿಗೇ ಗೊತ್ತು.
ಕೆಲ ಮಹಿಳೆಯರು ತಮ್ಮ ಸಂಸಾರದೊಂದಿಗೆ ಇಲ್ಲಿ ವಾಸವಿದ್ದರೆ, ಇನ್ನೂ ಕೆಲವರು ಗಂಡ, ಮಕ್ಕಳನ್ನು ಊರಲ್ಲಿ ಬಿಟ್ಟು ಬಂದಿದ್ದಾರೆ. ಅವರೆಲ್ಲಾ ಒಟ್ಟಿಗೆ ಕುಳಿತಾಗ, ಬಿಟ್ಟು ಬಂದ ಊರಿನ ಬಗ್ಗೆ, ತಮ್ಮ ಬಾಲ್ಯದ ಬಗ್ಗೆ. ನಿನ್ನೆ ನೋಡಿದ ಸಿನಿಮಾ, ಧಾರಾವಾಹಿಯ ಬಗ್ಗೆ ಮಾತು ಸಾಗುತ್ತದಂತೆ. ದಸರಾ ಅಥವಾ ದೀಪಾವಳಿಗೆಂದು ಹತ್ತೋ, ಹನ್ನೆರಡೋ ದಿನ ರಜೆ ಪಡೆದು, ಊರಿಗೆ ಹೊರಟಾಗಲೇ ಇವರ ಕೈಗಳಿಗೆ ಬಿಡುವು ಸಿಗುವುದು.
ಒಂದೊಂದು ಹೋಟೆಲ್‌ನಲ್ಲಿ, ರೊಟ್ಟಿ ತಟ್ಟುವ 3 -5 ಮಹಿಳೆಯರು ಇದ್ದಾರೆ. ಸೋಮವಾರದ ದಿನ ವಾರದ ರಜೆ ಪಡೆಯುವ ಇವರು, ಗ್ರಾಹಕರ ಸಂಖ್ಯೆ ಹೆಚ್ಚಿದ್ದಾಗ ಎರಡೆರಡು ಹೆಂಚನ್ನಿಟ್ಟು ಗಡಿಬಿಡಿಯಲ್ಲಿ ರೊಟ್ಟಿ ತಟ್ಟಬೇಕಾಗುತ್ತದಂತೆ. ವಾರಾಂತ್ಯದಲ್ಲಿ ರೊಟ್ಟಿಗಳಿಗೆ ಬೇಡಿಕೆ ಹೆಚ್ಚಿರುವುದರಿಂದ, ಅವರಿಗೆ ಕೆಲಸವೂ ಜಾಸ್ತಿಯಿರುತ್ತದೆ.
ರೊಟ್ಟಿ ತಟ್ಟುವುದು ನಮಗೆ ಬೇಸರದ ಕೆಲಸವಲ್ಲ. ಮನೆಯಲ್ಲಿದ್ದಾಗ 10-20 ರೊಟ್ಟಿ ಮಾಡುತ್ತಿದ್ದೆವು. ಇಲ್ಲಿಗೆ ಬಂದ್ಮೇಲೆ, ರೊಟ್ಟಿ ಮೆಷಿನ್‌ಗಿಂತ ಸ್ಪೀಡ್ ಆಗಿ 100-150 ರೊಟ್ಟಿಗಳನ್ನು ಪಟ-ಪಟ ಅಂತ ತಟ್ಟಿ ಹಾಕುತ್ತೇವೆ.
-ಶಿವಮ್ಮ
* ಭಾಗ್ಯ ಎಸ್. ಬುಳ್ಳಾ.