ಧಾರವಾಡ: ಅಲ್ಲಲ್ಲಿ ಮುಗಿಯದ ಫುಟ್ಪಾತ್ ಕೆಲಸಗಳು..ಇನ್ನೂ ಬೆಳಗದ ಅದೆಷ್ಟೋ ನೂರು ಬೀದಿದೀಪಗಳು..ಪೂರ್ಣಗೊಳ್ಳದ ನವಲೂರು ರೈಲ್ವೆ ಕ್ರಾಸಿಂಗ್ ಸೇತುವೆ..ಅಪೂರ್ಣವಾಗಿಯೇ ಉಳಿದ ಬಿಆರ್‌ಟಿಎಸ್ ಕಾಮಗಾರಿ… ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದ ಜನಸಂಪರ್ಕದ ಕೊಂಡಿಯಾಗಿ ಬೆಳೆದು ನಿಂತಿರುವ ಬಿಆರ್‌ಟಿಎಸ್ ಬಸ್ ಸೇವೆ ಇನ್ನೂ ಪರಿಪೂರ್ಣ ಸ್ಥಿತಿ ತಲುಪುತ್ತಲೇ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿರುವ ಈ ಅಂಶಗಳು, ಬಿಆರ್‌ಟಿಎಸ್ ಯೋಜನೆ ಪೂರ್ಣಗೊಳ್ಳುವುದೆಂದು? ಎನ್ನುವ ಪ್ರಶ್ನೆಯನ್ನು ಮೂಡಿಸುತ್ತಿದೆ. ಹೌದು. ಬರೊಬ್ಬರಿ ಎಂಟು ವರ್ಷಗಳಿಂದ 12 ಬಾರಿ ಡೆಡ್‌ಲೈನ್(ಕಾಲಮಿತಿ) ಹಾಕಿಕೊಂಡು ಬಿಆರ್‌ಟಿಎಸ್ ಕಾಮಗಾರಿ ಮುಕ್ತಾಯಗೊಳಿಸುವುದಕ್ಕೆ ಜಿಲ್ಲಾಡಳಿತ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿದ್ದರೂ, ಇನ್ನೂ ಬಿಆರ್‌ಟಿಎಸ್ ಪರಿಪೂರ್ಣ ಹಂತಕ್ಕೆ ಬಂದು ತಲುಪುತ್ತಲೇ ಇಲ್ಲ.
ಸದ್ಯಕ್ಕೆ 120 ಕ್ಕೂ ಹೆಚ್ಚು ಚಿಗರಿ ಬಸ್ ಸೇವೆಗಳನ್ನೇನೋ ಆರಂಭಿಸಲಾಗಿದೆ. ಆದರೆ ಅಲ್ಲಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಬಸ್ ಸೇವೆಗೆ ಅಡಚಣೆಯಾಗುತ್ತಿದೆ. ಇನ್ನು ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಬಿಆರ್‌ಟಿಎಸ್ ರಸ್ತೆಯುದ್ಧಕ್ಕೂ ಬೀದಿದೀಪಗಳನ್ನು ಅಳವಡಿಸಲಾಗಿದೆ. ಆದರೆ ಎರಡೂ ನಗರಗಳ ಮಧ್ಯದ ಕಾರಿಡಾರ್ ರಸ್ತೆಯಲ್ಲಿ ಇನ್ನೂ ಬೀದಿದೀಪಗಳು ಬಂದಿಲ್ಲ. ಸೇತುವೆ-ಕಾರಿಡಾರ್ ಕಟ್: ನವಲೂರು ಬಳಿಯ ಸೇತುವೆ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಸ್ಥಳೀಯರು ಆರಂಭದಲ್ಲಿ ಸ್ಕೈವಾಕ್ ಬದಲು ನೆಲ ಸೇತುವೆ ಕೇಳಿದ್ದರು. ಇದೀಗ ರಸ್ತೆ ಕ್ರಾಸ್‌ಗೆ ರ್‍ಯಾಂಪ್ ಕೇಳುತ್ತಿದ್ದು ಅದನ್ನು ಹೈ ಪವರ್ ಕಮಿಟಿಯಲ್ಲಿ ನಿರ್ಧರಿಸಲು ಕಾಯ್ದಿರಿಸಲಾಗಿದೆ. ಹೀಗಾಗಿ ಈ ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿದೆ. ಇನ್ನು ಸನಾ ಕಾಲೇಜು ಬಳಿ ಧಾರ್ಮಿಕ ಸ್ಥಳವೊಂದರ ವಿವಾದದ ಹಿನ್ನೆಲೆಯಲ್ಲಿ ಅಲ್ಲಿಯೂ ಬಿಆರ್‌ಟಿಎಸ್ ಪ್ರತ್ಯೇಕ ರಸ್ತೆ ಕಾಮಗಾರಿ ಹಾಗೆ ಉಳಿದಿದೆ. ಒಂದು ಕೋಮಿನ 12 ಮಂದಿರಗಳನ್ನು ತೆರವುಗೊಳಿಸಲಾಗಿದ್ದು, ಇನ್ನೊಂದು ಕೋಮಿನ ಪ್ರಾರ್ಥನಾ ಸ್ಥಳ ತೆರವು ಯಾಕೆ ಮಾಡಿಲ್ಲ ಎಂದು ಅನೇಕ ಬಾರಿ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಸದ್ಯಕ್ಕೆ ಇಲ್ಲಿ ಬಿಆರ್‌ಟಿಎಸ್‌ನ ಯಾವುದೇ ಕಾಮಗಾರಿ ನಡೆಸಲಾಗುತ್ತಿಲ್ಲ.
ಬಿಆರ್‌ಟಿಎಸ್‌ನ ಶೇ.92 ಕಾಮಗಾರಿಗಳು ಮುಕ್ತಾಯಗೊಂಡಿವೆ. ಇದೀಗ ಪೂರ್ಣಪ್ರಮಾಣದಲ್ಲಿ ಸಾರಿಗೆ ಸೇವೆ ಚಾಲನೆಯಲ್ಲಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸತ್ಯ. ಇಲ್ಲಿ ಸಣ್ಣಪುಟ್ಟ ತೊಂದರೆಗಳಿದ್ದು, ಅವುಗಳನ್ನು ಶೀಘ್ರ ಸರಿಪಡಿಸುತ್ತೇವೆ. •ದೀಪಾಚೋಳನ್,ಡಿಸಿ,ಧಾರವಾಡ.
ಬಿಆರ್‌ಟಿಎಸ್ ಪಾರ್ಕಿಂಗ್:
ಇನ್ನು ಬಿಆರ್‌ಟಿಎಸ್ ರಸ್ತೆಯಾದಾಗಿನಿಂದ ಪಕ್ಕದ ಕಾರಿಡಾರ್ ರಸ್ತೆಗಳಲ್ಲಿ ಕಾರು,ಲಾರಿ ಮತ್ತು ಬೈಕ್‌ಗಳ ಪಾರ್ಕಿಂಗ್ ಹಾವಳಿ ಮುಂದುವರಿದಿದೆ. ಆರಂಭದಲ್ಲಿಯೇ ಯೋಜಿಸಿದಂತೆ ಬಿಆರ್‌ಟಿಎಸ್‌ಗೆ ಸಮಾನಾಂತರವಾಗಿ ನಿರ್ಮಾಣಗೊಂಡ ಸಾಮಾನ್ಯ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಪಾರ್ಕಿಂಗ್‌ಗೆ ಅವಕಾಶ ನೀಡಲ್ಲ ಎಂದು ಜಿಲ್ಲಾಡಳಿತ ಮತ್ತು ಕಂಪನಿ ಹಲವು ಬಾರಿ ಹೇಳಿತ್ತು. ಆದರೆ ಧಾರವಾಡ,ಹುಬ್ಬಳ್ಳಿ ನಗರ ಮತ್ತು ನಗರ ಮಧ್ಯದಲ್ಲಿರುವ ಸಮಾನಾಂತರ ರಸ್ತೆಯಲ್ಲಿ ಎಲ್ಲೆಂದರೆಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದು ಸಮಾನಾಂತರ ರಸ್ತೆಗಳಲ್ಲಿನ ಸಂಚಾರ ವ್ಯತ್ಯಯಕ್ಕೆ ಕಾರಣವಾಗುತ್ತಿದೆ. ಧಾರವಾಡದ ಕೋರ್ಟ್ ವೃತ್ತದಿಂದ ಜ್ಯುಬಿಲಿ ವೃತ್ತದವರೆಗೆ, ಟೋಲ್ನಾಕಾದಿಂದ ಎನ್‌ಟಿಟಿಎಫ್ ವರೆಗೂ ಬಿಆರ್‌ಟಿಎಸ್ ಸಮಾನಾಂತರ ರಸ್ತೆಗಳಲ್ಲಿ ಪಾರ್ಕಿಂಗ್ ಹಾವಳಿ ಇದ್ದೇ ಇದೆ. ಅಷ್ಟೇಯಲ್ಲ, ಬಿಆರ್‌ಟಿಎಸ್ ರಸ್ತೆಯಲ್ಲೇ ಅನೇಕರೂ ಎಗ್ಗಿಲ್ಲದೇ ವಾಹನ ನುಗ್ಗಿಸಿಕೊಂಡು ಹೋಗುವ ಮತ್ತು ತಡೆಯಲು ಬಂದ ಅಧಿಕಾರಿಗೆ ಗುದ್ದಿ ಹೋದ ಪ್ರಕರಣಗಳು ನಡೆದಿವೆ.
Advertisement
ಸರ್ಕಾರಿ ಬಸ್‌ಗೇಕೆ ನೋ ಎಂಟ್ರಿ?
ಜೂನ್ ಬಳಿಕವೂ ಬೇಂದ್ರೆ ಬಸ್?:
ಆರಂಭದಲ್ಲಿ ಸಾಕಷ್ಟು ವಿರೋಧ ಎದುರಿಸಿದ್ದ ಬೇಂದ್ರೆ ಸಾರಿಗೆ ಬಸ್ ಸೇವೆ ಪರವಾನಗಿ ಜೂನ್,2019ರ ಕ್ಕೆ ಮುಕ್ತಾಯವಾಗಲಿದೆ. ಈ ಬಸ್‌ಗಳು ಕಡಿಮೆಯಾದರೆ ಮಾತ್ರ ಬಿಆರ್‌ಟಿಎಸ್‌ಗೆ ಹೆಚ್ಚಿನ ಲಾಭ ಲಭಿಸುತ್ತದೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಅಷ್ಟೇಯಲ್ಲ, ಬಿಆರ್‌ಟಿಎಸ್ ಯೋಜನೆ ಯಶಸ್ವಿಯಾಗಬೇಕಾದರೆ ಖಾಸಗಿ ಸರ್ವಿಸ್‌ಗಳು ಇಲ್ಲಿ ಸೇವೆ ನಿಲ್ಲಿಸಬೇಕು. ಆದರೆ ಬೇಂದ್ರೆ ಸಾರಿಗೆ ಬಸ್‌ಗಳನ್ನು ಕಾರಿಡಾರ್ ರಸ್ತೆಯಲ್ಲೇ ಓಡಾಟಕ್ಕೆ ಉಳಿಸಿಕೊಳ್ಳುವ ಯೋಚನೆ ಮಾಡಲಾಗಿದೆ. ಈ ಸಂಬಂಧ ಉನ್ನತ ಅಧಿಕಾರ ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
Advertisement