Advertisement

ಚಾಲನೆ ನೀಡಿ ತಿಂಗಳಾದ್ರೂ ಕಾಮಗಾರಿ ಆರಂಭಿಸಿಲ್ಲ

01:09 PM Sep 14, 2019 | Suhan S |

ಮಾಸ್ತಿ: ಗ್ರಾಮದಿಂದ ತಮಿಳುನಾಡು ಗಡಿಗೆ ಸಂಪರ್ಕ ಕಲ್ಪಿಸುವ ತುರುಣಿಸಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಿಂಗಳ ಹಿಂದೆ ಶಾಸಕ ಕೆ.ವೈ.ನಂಜೇಗೌಡ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದರು. ಆದರೆ, ಗುತ್ತಿಗೆದಾರ ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದ ವಾಹನ ಸವಾರರು ಹದಗೆಟ್ಟ ರಸ್ತೆಯಲ್ಲೇ ಸಂಚರಿಸಬೇಕಿದೆ.

Advertisement

ಮಾಸ್ತಿ ಗ್ರಾಮದಿಂದ ತಮಿಳುನಾಡು ಗಡಿಗೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ತುರುಣಿಸಿ ರಸ್ತೆಯೂ ಹದಗೆಟ್ಟು ಹಲವು ವರ್ಷಗಳೇ ಕಳೆದಿವೆ. ಈ ಭಾಗದ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಶ್ಯಾಮಶೆಟ್ಟಹಳ್ಳಿ, ದುರಸಂಡಹಳ್ಳಿ, ಕರೀಸಂದ್ರ, ತ್ಯಾಗನದೊಡ್ಡಿ, ಮಲಕನಹಳ್ಳಿ ಗ್ರಾಮಗಳು ಬರಲಿವೆ. ಪ್ರತಿ ದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಅಲ್ಲದೆ, ಕೆಎಸ್‌ಆರ್‌ಟಿಸಿ ಬಸ್‌ ಕೂಡ ಓಡಾಡುತ್ತದೆ. ಈ ಹದಗೆಟ್ಟ ರಸ್ತೆಯಲ್ಲಿ ಮಾಸ್ತಿ ಗ್ರಾಮದಲ್ಲಿನ ಶಾಲಾ ಕಾಲೇಜಿಗೆ ನಿತ್ಯ ಹತ್ತಾರು ವಿದ್ಯಾರ್ಥಿಗಳು ಬರುತ್ತಾರೆ.

ಮಳೆ ಬಂದ್ರೆ ಕೆರೆಯಾಗುವ ರಸ್ತೆ: ರಸ್ತೆಯಲ್ಲಿ ಅಡಿಗೊಂದು ಗುಂಡಿ ಬಿದ್ದಿದ್ದು, ಗುಂಡಿಗಳನ್ನು ತಪ್ಪಿಸಲು ಹೋಗಿ ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ, ಕೆಲವರು ಎದುರಿಗೆ ಬರುವ ವಾಹನಕ್ಕೆ ಡಿಕ್ಕಿ ಹೊಡೆದು ಪ್ರಾಣಕೂಡ ಕಳೆದುಕೊಂಡಿದ್ದಾರೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಕೆರೆಯಂ ತಾಗುತ್ತದೆ. ರಸ್ತೆ ಯಾವುದು, ಗುಂಡಿ ಯಾವುದು ತಿಳಿಯುವುದಿಲ್ಲ. ವಾಹನ ಬಂದರೆ ಸಾಕು ರಸ್ತೆಯಲ್ಲಿ ಎದ್ದಿರುವ ಜಲ್ಲಿಕಲ್ಲು ಎಲ್ಲಿ ಬಡಿಯುತ್ತೋ ಎಂದು ಪಾದಚಾರಿಗಳು ಮಾರು ದೂರು ಓಡುತ್ತಾರೆ.

ಕೊಳಚೆ ನೀರಿನ ಅಭಿಷೇಕ: ಮಳೆ ಬಂದಾಗ ಈ ರಸ್ತೆ ಬದಿಯಲ್ಲಿ ನಡೆದುಹೋಗಲು ಭಯವಾಗುತ್ತದೆ. ವಾಹನ ಬಂದರೆ ಸಾಕು ಎಲ್ಲಿ ಕೆಸರು ಸಿಡಿಯುತ್ತದೋ ಎಂದು ಜನ ಆತಂಕದಲ್ಲೇ ಓಡಾಡುತ್ತಾರೆ. ಕೆಲವೊಮ್ಮೆ ನಾಲ್ಕು ಚಕ್ರ, ಲಾರಿ ಬಸ್‌ ಬಂದಾಗ ಪಕ್ಕದಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರಿಗೆ ಕೆಸರಿನ ಅಭಿಷೇಕವಾಗಿರುವ ಘಟನೆಗಳು ನಡೆದಿವೆ.

ಪಿಡಬ್ಲ್ಯೂಡಿ ನಿರ್ಲಕ್ಷ್ಯ: ಮಳೆ ಬಂದರೆ ಜಲಾಭಿಷೇಕ, ಇಲ್ಲದಿದ್ದರೆ ದೂಳಿನಾಭಿಷೇಕವಾಗುತ್ತದೆ. ಹದಗೆಟ್ಟಿರುವ ರಸ್ತೆಯಿಂದ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸಲು ಆಸಕ್ತಿ ತೋರಿದ ಕಾರಣ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ.

Advertisement

ಕಾಮಗಾರಿಗೆ ಚಾಲನೆ: ಒಎಫ್ಆರ್‌ ಯೋಜನೆಯ 2 ಕೋಟಿ ರೂ.ನಲ್ಲಿ ಮಾಸ್ತಿ ಗ್ರಾಮದಿಂದ ತಮಿಳುನಾಡು ಗಡಿಗೆ ಸಂಪರ್ಕ ಕಲ್ಪಿಸುವ 6 ಕಿ.ಮೀ. ತುರುಣಿಸಿ ರಸ್ತೆ ಅಭಿವೃದ್ಧಿಗೆ ಹಲವು ಸಂಘಟನೆಗಳು ಪ್ರತಿಭಟನೆ ಮಾಡಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದವು. ಸಾರ್ವಜನಿಕರು ಸಹ ಶಾಸಕರ ಗಮನಕ್ಕೆ ತಂದಿದ್ದರು. ಮಾಧ್ಯಮಗಳಲ್ಲೂ ಹಲವು ಬಾರಿ ಸುದ್ದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ತಿಂಗಳ ಹಿಂದೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು.

ಈ ವೇಳೆ ಮಾತನಾಡಿದ್ದ ಶಾಸಕರು, ರಸ್ತೆಯ ಕಾಮಗಾರಿಯನ್ನು ಇಂದಿನಿಂದಲೇ ಪ್ರಾರಂಭಿಸಿ, ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಸ್ಥಗಿತಗೊಳಿಸದೆ ಗುಣಮಟ್ಟದ ಡಾಂಬರೀಕರಣ ಮಾಡುವಂತೆ ಗುತ್ತಿಗೆದಾರರಿಗೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು ಬಿಟ್ಟರೆ ಈವರೆಗೂ ರಸ್ತೆ ಕಾಮಗಾರಿ ಆರಂಭಿಸಲು ಮುಂದಾಗಿಲ್ಲ.

 

● ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next