ಲಕ್ಷ್ಮೇಶ್ವರ: ತಾಲೂಕಿನ ಹುಲ್ಲೂರ ಗ್ರಾಮದಿಂದ ಸೂರಣಗಿ ರಸ್ತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 3.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ 3 ಕಿ.ಮೀ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡು ಈ ಭಾಗದ ನೂರಾರು ರೈತರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ಈ ರಸ್ತೆಗೆ ಹೊಂದಿಕೊಂಡಂತೆ ಅನೇಕ ರೈತರ ಜಮೀನುಗಳನ್ನು ಸಮೀಕ್ಷೆ ಮಾಡಿ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಕೆಲವೇ ರೈತರು ಆರಂಭದಿಂದಲೂ ತಗಾಧೆ ತೆಗೆದಿರುವ ಕಾರಣ ನೀಡಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಯುದ್ದಕ್ಕೂ ಕೊರಲು ಬಿದ್ದಿವೆ. ಅಲ್ಲದೇ ರಸ್ತೆ ನಿರ್ಮಾಣಕ್ಕಾಗಿ ಹಾಕಿರುವ ಕಲ್ಲು, ಖಡಿ, ಮೊರಂ ರಸ್ತೆ ತುಂಬೆಲ್ಲ ಹರಡಿ ಜಾನುವಾರುಗಳು, ಎತ್ತು, ಚಕ್ಕಡಿ, ಟ್ರ್ಯಾಕ್ಟರ್, ಮೋಟರ್ ಸೈಕಲ್ ಯಾವುದೂ ಹೋಗದಂತಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇದರಿಂದಾಗಿ ರೈತರು ಈ ವರ್ಷ ಮುಂಗಾರಿನ ಬಿತ್ತನೆಗೆ ಸೂರಣಗಿ ಸುತ್ತು ಮಾರ್ಗ ಬಳಸಿ ಜಮೀನುಗಳಿಗೆ ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಬೇಕು ಎಂದು ಸಂಬಂಧಪಟ್ಟ ಎಲ್ಲರಿಗೂ ರೈತರು ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗದಿದ್ದರಿಂದ ರೊಚ್ಚಿಗೆದ್ದ ರೈತರು ಸಂಬಂಧಪಟ್ಟವರ ಗಮನ ಸೆಳೆಯಲು ಈ ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿದ್ದಾರೆ.
ರಸ್ತೆಯನ್ನು ಸಂಬಂಧಪಟ್ಟವರು ಕ್ರಮ ಕೈಗೊಂಡು ಮುಕ್ತಮಾಡಬೇಕು ಎಂದು ರೈತರಾದ ಮುತ್ತಪ್ಪ ಮುದಕಣ್ಣವರ, ಶಿವಪ್ಪ ಮಾಗಡಿ, ಶಿವಪುತ್ರಯ್ಯ ಅಮೋಘಿಮಠ, ಗುರುಸಿದ್ಧಪ್ಪ ರಗಟಿ, ಎಂ.ಎಂ. ಗಾಡಗೋಳಿ, ಶಂಭು ರಗಟಿ, ಇಬ್ರಾಹಿಂಸಾಬ್ ನದಾಫ್, ನಬೀಸಾಬ್ ನದಾಫ್, ಶೇಖಪ್ಪ ಮುದಕಣ್ಣವರ, ವಿರೂಪಾಕ್ಷಪ್ಪ ಮುದಕಣ್ಣವರ, ಸಿದ್ಧಪ್ಪ ಹಡಗಲಿ ಮತ್ತಿತರರು ಆಗ್ರಹಿಸಿದ್ದಾರೆ.