ದಾವಣಗೆರೆ: ಸಿವಿಲ್ ಇಂಜಿನಿಯರ್‌ಗಳಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿರುವುದರಿಂದ ಅವರು ಮಾನವೀಯ ನೆಲೆಗಟ್ಟಲ್ಲೇ ಕೆಲಸ ಮಾಡಬೇಕಿದೆ ಎಂದು ದಾವಣಗೆರೆ 24+7 ಕುಡಿಯುವ ನೀರು ಪೂರೈಕೆ ಯೋಜನೆ ಜಲಸಿರಿ ಯೋಜನೆಯ ಅಧೀಕ್ಷಕ ಇಂಜಿನಿಯರ್ ಆರ್.ಸಿ. ಮೋಹನ್ ತಿಳಿಸಿದ್ದಾರೆ.
ಬಿಐಇಟಿ ಕಾಲೇಜಿನಲ್ಲಿ ಬುಧವಾರ ಸಿವಿಲ್ ಇಂಜಿನಿಯರಿಂಗ್ ಫೋರಂ, ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ನಮಗೆ ಸಾಕಷ್ಟು ಕೊಡುತ್ತದೆ. ಅದಕ್ಕೆ ಪ್ರತಿಫಲವಾಗಿ ನಾವು ನಮ್ಮದೇ ಆದ ಕೊಡುಗೆ ನೀಡಬೇಕಿದೆ. ಸಮಾಜಕ್ಕಾಗಿ ಸಾಧ್ಯವಾದಷ್ಟು ಕೊಡುಗೆ ನೀಡುವ ಉದ್ದೇಶ ಇಟ್ಟುಕೊಂಡು ಇಂಜಿನಿಯರಿಂಗ್ ಜೀವನ ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ| ಎಚ್.ಬಿ. ಅರವಿಂದ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಕೇವಲ ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದರೆ ಸಾಲದು. ತಮ್ಮ ವಿದ್ಯಾಭ್ಯಾಸದ ಜೊತೆಗೆ ಹೊಸ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶ ನೀಡಬೇಕು ಎಂದರು.
ವ್ಯಾಸಂಗದ ವೇಳೆ ವಿದ್ಯಾರ್ಥಿಗಳ ಗಮನ ತಮ್ಮ ಶೈಕ್ಷಣಿಕ ಸಾಧನೆ ಕಡೆಗೆ ಇರಬೇಕು. ಹಾಸ್ಟೆಲ್, ಊಟ, ಬಟ್ಟೆ ಮುಂತಾದ ಸವಲತ್ತುಗಳಿಗಾಗಿ ಹೋರಾಟ ಮಾಡುವಂತಹ ಮನೋಭಾವದಿಂದ ದೂರ ಇರಬೇಕು. ಉತ್ತಮ ಶೈಕ್ಷಣಿಕ ಸಾಧನೆ ನಂತರ ಅವೆಲ್ಲಾ ತಾವಾಗಿಯೇ ಬರುತ್ತವೆ. ಹೊಸದಾಗಿ ಇಂಜಿನಿಯರಿಂಗ್ ಕೆಲಸ ಆರಂಭಿಸಿದ ನಂತರ ಅನೇಕ ಸಂದರ್ಭದಲ್ಲಿ ಉಪವಾಸ, ವನವಾಸ ಅನುಭವಿಸಬೇಕಾದ ಸಂದರ್ಭ ಬರುತ್ತದೆ. ಕಾಲೇಜು ದಿನಗಳಲ್ಲಿ ಅಂತಹ ದಿನಗಳು ಬಂದರೂ ಅವನ್ನೇ ಸಾಧನೆಯ ಮೆಟ್ಟಿಲು ಅಂದುಕೊಳ್ಳಿ ಎಂದು ಸಲಹೆ ನೀಡಿದರು.
ವೇದಿಕೆ ಮೂಲಕ ನಡೆಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಿ. ಸಿವಿಲ್ ಇಂಜಿನಿಯರಿಂಗ್ ಕೆಲಸ ವೀಕ್ಷಣೆಗೆ ಕಾಮಗಾರಿ ಜಾಗಗಳಿಗೆ ಹೋದಾಗ ಹೆಚ್ಚಿನ ಜ್ಞಾನ ಸಂಪಾದನೆಗೆ ಮುಂದಾಗಿ. ತರಗತಿಗಳಲ್ಲಿ ನಿಮಗೆ ಅಕ್ಷರದ ಮೂಲಕ ಜ್ಞಾನ ಸಿಗುತ್ತದೆ.
ಆದರೆ, ಕಾಮಗಾರಿ ನಡೆಯುವ ಸ್ಥಳಕ್ಕೆ ಹೋದಾಗ ಕ್ರಿಯಾತ್ಮಕ ಜ್ಞಾನ ಸಿಗುತ್ತದೆ. ಅಕ್ಷರದ ಮೂಲಕ ಸಿಗುವ ಜ್ಞಾನಕ್ಕಿಂತ ಚಟುವಟಿಕೆ ಆಧಾರಿತ ಜ್ಞಾನ ದೊಡ್ಡದು ಎಂದು ತಿಳಿಸಿದರು.
ವೇದಿಕೆಯ ಸಂಚಾಲಕ ಪ್ರೊ| ಆರ್.ಎಸ್. ಚಿಕ್ಕನಗೌಡರ್, ಪ್ರೊ| ವೀಣಾಕುಮಾರಿ, ಆದಿ, ಪ್ರೊ| ಎಸ್. ಸುರೇಶ್, ಸಿ.ಪಿ. ಅನಿಲಕುಮಾರ್ ವೇದಿಕೆಯಲ್ಲಿದ್ದರು.