ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಹೊಸ ಬಗೆಯ ಕೆಲಸದ ವಾತಾವರಣವೊಂದು ನಮ್ಮನಡುವೆ ಸೃಷ್ಟಿಯಾಗಿದೆ. ಸಾಫ್ಟ್ವೇರ್ ಮಂದಿ ಮಾತ್ರವೇ ರುಚಿ ನೋಡಿದ್ದ ಈ ಸವಲತ್ತು, ಇದೀಗ ಇತರೆ ಕಾರ್ಯಕ್ಷೇತ್ರಕ್ಕೂ ಹರಡಿದೆ. ಇಷ್ಟು ದಿನ “ವರ್ಕ್ ಫ್ರಮ್ ಹೋಂ’ ಎನ್ನುವುದು ಕೆಲವೇ ಸೀಮಿತ ಕಾರ್ಯಕ್ಷೇತ್ರಗಳ ಉದ್ಯೋಗಿಗಳಿಗೆ ಮಾತ್ರವೇ ಲಭ್ಯವಿತ್ತು. ಇತರೆ ಕಾರ್ಯಕ್ಷೇತ್ರಗಳಲ್ಲಿ ಆ ಸೌಲಭ್ಯವನ್ನು ಒದಗಿಸುವುದು ಅಷ್ಟೇನೂ ಪರಿಣಾಮಕಾರಿ ತಂತ್ರವಲ್ಲ ಎಂದೇ ತಿಳಿಯಲಾಗಿತ್ತು. ಆ ಮಾತೇನೋ ನಿಜ.ಫಿಲ್ಡ್ ನಲ್ಲಿ ಕೆಲಸ ಮಾಡುವ ಅನಿವಾರ್ಯತೆಯುಳ್ಳ ಕೆಲವೊಂದು ಉದ್ಯೋಗ ಕ್ಷೇತ್ರಗಳಲ್ಲಿ ವರ್ಕ್ ಫ್ರಮ್ ಹೋಂ ಸವಲತ್ತನ್ನು ನೀಡಲು ಸಾಧ್ಯವಾಗುವುದಿಲ್ಲ.
ಆದರೆ, ಮನೆಯಿಂದ ಕೆಲಸ ಮಾಡಲು ಸಾಧ್ಯವಿದ್ದು, ಇಲ್ಲಿಯವರೆಗೆ ಆ ಪ್ರಯೋಗವನ್ನು ಮಾಡದೇ ಇದ್ದ ಕ್ಷೇತ್ರಗಳು ಈಗ ಅದರ ರುಚಿ ನೋಡುತ್ತಿವೆ. ಸುಹಾಸ್ ಆಚಾರ್ಯ, ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನೆಲೆಗೊಂಡಿರುವ ಪ್ರಾಡಕ್ಟ್ ಬೇಸ್ಡ್ ಕಂಪನಿಯೊಂದರ ಉದ್ಯೋಗಿ. ರಜೆ ನಿಮಿತ್ತ ತನ್ನ ಊರಾದ ಕಾರ್ಕಳಕ್ಕೆ ಬಂದಿದ್ದ. ಅಷ್ಟರಲ್ಲಿ ಲಾಕ್ ಡೌನ್ ಆದೇಶ ಹೊರಬಿದ್ದಿತ್ತು. ಕೆಲಸದ ನಿಮಿತ್ತ ವಿದೇಶಗಳಿಗೆ ತೆರಳುತ್ತಿದ್ದ ಆತ, ಈಗ ಕಾರ್ಕಳದಿಂದ ಕೆಲವು ಕಿ.ಮೀ.ಗಳಷ್ಟು ದೂರದಲ್ಲಿರುವ ಗ್ರಾಮವೊಂದರಿಂದ ಕಚೇರಿ ಕೆಲಸಕ್ಕೆ ಲಾಗಿನ್ ಆಗುತ್ತಾನೆ. ಲ್ಯಾಪ್ ಟಾಪಿನಿಂದಲೇ ಕೆಲಸಗಳನ್ನು ಮುಗಿಸುತ್ತಾನೆ.
ಒಂದೇ ವ್ಯತ್ಯಾಸ ಎಂದರೆ, ಕಚೇರಿಯಲ್ಲಿದರೆ 8ರಿಂದ 9 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ. ಈಗ ಇಂತಿಷ್ಟೇ ಹೊತ್ತು ಎಂದಿಲ್ಲ. ಮಧ್ಯ ಮಧ್ಯದಲ್ಲಿ ಬಿಡುವು ತೆಗೆದುಕೊಳ್ಳುವುದರಿಂದ ಕೆಲಸದ ಅವಧಿ ಹೆಚ್ಚುತ್ತದೆ. ಅಲ್ಲದೆ, ಇದು ಹೊಸ ವ್ಯವಸ್ಥೆ ಆಗಿರುವುದರಿಂದ
ಕಳೆಯುವ ಕೂಡುವ.. : ಒಗ್ಗಿಕೊಳ್ಳಲು ಕೊಂಚ ಸಮಯ ಬೇಡುತ್ತದೆ. ನಂತರ ಅದೂ ಸಲೀಸು ಎನ್ನುವುದು ಆತನ ಅಭಿಪ್ರಾಯ. ವರ್ಕ್ ಫ್ರಮ್ ಹೋಂ ನೀಡಿರುವ ಎಲ್ಲಾ ಆಫೀಸುಗಳು, ಭವಿಷ್ಯದ ದಿನಗಳಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗುವುದುಅನುಮಾನ. ಆದರೂ, ಹೊಸದೊಂದು ಬಗೆಯ ವರ್ಕ್ ಲೈಫ್ಗೆ ತೆರೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೆಷ್ಟೋ ಸಂಸ್ಥೆಗಳು ಈಗೀಗ ಇದರ ಅನುಕೂಲಗಳನ್ನು ಪರಾಮರ್ಶಿಸುತ್ತಿವೆ. ವರ್ಕ್ ಫ್ರಮ್ ಹೋಂನ ಸಾಧಕ- ಬಾಧಕಗಳನ್ನು ಪರೀಕ್ಷಿಸುತ್ತಿವೆ. ಒಂದಂತೂ ನಿಜ, ಯಾವುದೇ ವ್ಯವಸ್ಥೆಯಾದರೂ ಅನುಕೂಲಗಳ ಜೊತೆಗೆ ಅನನುಕೂಲಗಳೂ ಇರುತ್ತವೆ.
ಆಫೀಸು ಸಂಸ್ಕೃತಿಯ ಉಪಯೋಗಗಳು : ಕಚೇರಿ ವಾತಾವರಣ ಪ್ರಾಡಕ್ಟಿವ್ ಪರಿಸರ ಕಲ್ಪಿಸಿಕೊಡುತ್ತದೆ. ಸಹೋದ್ಯೋಗಿಗಳೊಡನೆ ಒಡನಾಟವಿರುತ್ತದೆ. ಅವರ ಸಹಾಯದಿಂದ ಆಫೀಸಿಗೆ ಸಂಬಂಧಿಸಿದ ಅದೆಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ. ಅದಕ್ಕಿಂತ ಹೆಚ್ಚಾಗಿ, ಮನೆಯಲ್ಲಿ ಕುಳಿತವರು ಕಚೇರಿ ಕೆಲಸ ಬಿಟ್ಟು ಕಾಲಹರಣ ಮಾಡಬಹುದು ಎನ್ನುವ ಆತಂಕವೂ ಸಂಸ್ಥೆಗಿರುತ್ತದೆ. ಇತ್ತೀಚಿಗೆ ಖಾಸಗಿ ಸಂಸ್ಥೆಯೊಂದು ಮನೆಯಿಂದ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ವೆಬ್ ಕ್ಯಾಮೆರಾ ಮುಂದೆ 8 ಗಂಟೆಗಳ ಕಾಲ ಕಾಣಿಸಿಕೊಳ್ಳಬೇಕೆಂಬ ಫರ್ಮಾನು ಹೊರಡಿಸಿದ್ದನ್ನು ನೆನಪಿಸಿಕೊಳ್ಳಬಹುದು. ಒಟ್ಟಿನಲ್ಲಿ ಸಂಸ್ಥೆ ಹಾಗೂ ನೌಕರರು ಪರಸ್ಪರ ವಿಶ್ವಾಸದಿಂದ, ಜವಾಬ್ದಾರಿಗಳನ್ನು ಪೂರೈಸಿಕೊಂಡು ಜೊತೆಯಾಗಿ ಸಾಗಬೇಕಿದೆ.
WFH ಪರಿಸರ ಸ್ನೇಹಿ : ಮನೆಯಿಂದ ಕೆಲಸ ಮಾಡುವಾಗ, ಕಚೇರಿಯಲ್ಲಿ ದುಡಿಯುತ್ತಿದ್ದ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿಯಬೇಕಾಗಿ ಬಂದರೂ ಒಂದು ರೀತಿಯ ನಿರಾಳತೆ ಇರುತ್ತದೆ. ಒತ್ತಡ ಅಷ್ಟಾಗಿ ಇರುವುದಿಲ್ಲ. ಇನ್ನು ಮಹಿಳೆಯರಿಗೆ ವರ್ಕ್ ಫ್ರಮ್ ಹೋಮ್‌ನಿಂದ ಅನೇಕಅನುಕೂಲಗಳಿವೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವ ಸದವಕಾಶ ಸಿಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ, ನಗರಪ್ರದೇಶ ಹಾಗೂ ಮೆಟ್ರೋ ನಗರಗಳಲ್ಲಿ ಟ್ರಾಫಿಕ್ ದಟ್ಟಣೆ ವಾಹನ ಸಂಚಾರ ಕಡಿಮೆಯಾಗುತ್ತಿದ್ದಂತೆಯೇ ವಾಯು, ಶಬ್ದ ಮಾಲಿನ್ಯವೂ ಕಡಿಮೆಯಾಗುವುದು.
ವರ್ಕ್ ಫ್ರಮ್ ಎನಿವೇರ್! : ನಾವು ಈಗ ತಾನೇ ವರ್ಕ್ ಫ್ರಮ್ ಹೋಂ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದೇವಷ್ಟೆ. ಆದರೆ, ಹೊರದೇಶಗಳಲ್ಲಿ ವರ್ಕ್ ಫ್ರಮ್ ಹೋಮ್ ತುಂಬಾ ಹಳೆಯದು ಮತ್ತು ಅಲ್ಲಿ ಸರ್ವೇಸಾಮಾನ್ಯ. ಅಲ್ಲಿ “ವರ್ಕ್ ಫ್ರಮ್ ಎನಿವೇರ್’ ಸಂಸ್ಕೃತಿ ನಿಧಾನವಾಗಿ ಮುನ್ನಲೆಗೆ ಬರುತ್ತಿದೆ. “ವರ್ಕ್ ಫ್ರಮ್ ಎನಿವೇರ್’ ಹೆಸರೇ ಹೇಳುವಂತೆ, ಉದ್ಯೋಗಿ ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯ ಪಡೆದಿರುತ್ತಾನೆ. ಯಾವ ಸ್ಥಳದಿಂದಾದರೂ ಸರಿಯೇ, ಆದರೆ ದೇಶದೊಳಗೆ ಇರಬೇಕು ಎಂಬ ಕರಾರನ್ನು ವಿಧಿಸುವುದೂ ಇದೆ. ಇದರಿಂದಾಗಿ ಉದ್ಯೋಗಿ ಆಫೀಸು ಕಚೇರಿಯಿಂದ ಬಲು ದೂರ, ಪ್ರವಾಸದ ನಡುವೆಯೂ ಕೆಲಸ ಮಾಡಬಹುದು. ಎಲ್ಲೇ ಹೋದರೂ ಇಂಟರ್ನೆಟ್ ಸೌಲಭ್ಯ ಇರುವೆಡೆ ಹೋಗುವುದು ಬಹಳ ಮುಖ್ಯ.
-ಹವನ