Advertisement

ಜನರ ಧ್ವನಿಯಾಗಿ ಕೆಲಸ ಮಾಡುವೆ: ಬಾಳನಗೌಡ್ರ

11:40 AM Apr 22, 2019 | pallavi |

ಧಾರವಾಡ: ಜಿಲ್ಲೆಯ ಮತದಾರರು ಈ ಚುನಾವಣೆಯಲ್ಲಿ ಆರಿಸಿ ಕಳುಹಿಸಿದರೆ ಲೋಕಸಭಾ ವ್ಯಾಪ್ತಿಯ 8 ತಾಲೂಕುಗಳ ಮನೆಯ ಜೀತದಾಳಾಗಿ ಅಭಿವೃದ್ಧಿಯ ಕೆಲಸ ಮಾಡುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಬಾಳನಗೌಡ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ಮಹದಾಯಿ, ರೈತರ ಸಮಸ್ಯೆಗಳು, ಬೆಳೆ ಸಾಲ ಮನ್ನಾ, ದರ ನಿಗದಿ ಸೇರಿದಂತೆ ಜಿಲ್ಲೆಯ ಸಮಸ್ಯೆಗಳಿಗೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿನ ಎಲ್ಲ ರೈತರ 3 ಲಕ್ಷದ ವರೆಗಿನ ಸಾಲಾ ಮನ್ನಾ ಮಾಡಲು ಪ್ರಯತ್ನಿಸುತ್ತೇನೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ಬೆಳೆ ವಿಮಾ ಯೋಜನೆ ತಕ್ಷಣ ರೈತರ ಖಾತೆಗೆ ಜಮಾ ಮಾಡಿಸುತ್ತೇನೆ. ಜೊತೆಗೆ ಕಳಸಾ ಬಂಡೂರಿ, ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸಮಾಜದ ಎಲ್ಲ ಶಾಲಾ ಮಕ್ಕಳಿಗೆ ಉಚಿತ ಬಸ್‌ ಪಾಸ್‌, ಸರಕಾರಿ ನೌಕರರಿಗೆ ದವಸ ಧಾನ್ಯಗಳನ್ನು ಅರ್ಧ ಬೆಲೆಯಲ್ಲಿ ನೀಡುತ್ತೇನೆ. ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಾಸಿಕ 5 ಸಾವಿರ ಗೌರವಧನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚಂದ್ರಗೌಡ ಪಾಟೀಲ, ಚಂದ್ರಗೌಡ ರಾಚನಗೌಡ, ಮಲ್ಲಪ್ಪ ಮೇಟಿ ಇದ್ದರು.

ಕಾಂಗ್ರೆಸ್‌-ಬಿಜೆಪಿ ನಾಣ್ಯದ ಎರಡು ಮುಖ

ಧಾರವಾಡ: ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ನಾಣ್ಯದ ಎರಡು ಮುಖ ಆಗಿದ್ದು, ಜಾತಿ ಜನಾಂಗದ ಮೇಲೆ ಮತ ಕೇಳುವ ಈ ಎರಡು ಪಕ್ಷಗಳಿಗೆ ಮತ ನೀಡಬೇಡಿ ಎಂದು ಪಕ್ಷೇತರ ಅಭ್ಯರ್ಥಿ ಅಬ್ದುಲ್ ರೆಹಮಾನ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಂದ ಬಡವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾವುದೇ ಕಾರಣಕ್ಕೂ ನ್ಯಾಯ ಸಿಗದು. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು. ಶ್ರೀಮಂತರು ಹಾಗೂ ಬಂಡವಾಳಶಾಹಿಗಳ ಪರವಿರುವ ಪಕ್ಷಗಳ ವಿರುದ್ಧ ಮತ ಚಲಾವಣೆ ಮಾಡಬೇಕು ಎಂದರು. ಧಾರವಾಡದ ಜನತೆ ನನ್ನನ್ನು ಆರಿಸಿ ಕಳುಹಿಸಿದರೆ ಏಕರೀತಿ ಕಾನೂನು ಜಾರಿ, ರೈತರ ಜಮೀನುಗಳಿಗೆ ರಸ್ತೆ, ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆ, ವಾಯುಮಾಲಿನ್ಯ ಕಡಿಮೆ ಮಾಡಲು ಪ್ರಯತ್ನ, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ, ಸಮಾನತೆ ಪರ ಕೆಲಸ ಮಾಡುತ್ತೇನೆ ಎಂದರು. ಭಯೋತ್ಪಾದನೆ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಭಯೋತ್ಪಾದನೆ ಮಾಡುವ ಯಾರೇ ಇದ್ದರೂ ಅವರನ್ನು ಕ್ಷಮಿಸದೇ ಉಗ್ರ ಶಿಕ್ಷೆ ನೀಡಬೇಕು ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next