Advertisement

ವೇದಿಕೆಯಲ್ಲೇ ಯತ್ನಾಳ- ಬೊಮ್ಮಾಯಿ ವಾಕ್ಸಮರ..!

11:12 AM Jun 26, 2023 | Team Udayavani |

ಬೆಳಗಾವಿ: ಇತ್ತೀಚೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಶಾಮನೂರು ಶಿವಶಂಕರಪ್ಪ ಭೇಟಿ ಮಾಡಿದ್ದನ್ನು ಪ್ರಸ್ತಾಪಿಸಿದ ಬಸನಗೌಡ ಪಾಟೀಲ ಯತ್ನಾಳ, ಬೊಮ್ಮಾಯಿ ಅವರೇ ಇವರ್ಯಾರನ್ನೂ ಮನೆವರೆಗೆ ಬಿಟ್ಟುಕೊಳ್ಳಬೇಡಿ ಎಂದರು. ಇದಕ್ಕೆ ಬೊಮ್ಮಾಯಿ, ರಾಜಕಾರಣದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ತಿರುಗೇಟು ನೀಡಿದರು.

Advertisement

ಭಾನುವಾರ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಇಬ್ಬರೂ ನಾಯಕರು ಪರಸ್ಪರ ಈ ವಿಷಯ ಪ್ರಸ್ತಾಪಿಸಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟರು.

ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಮನೆಗೆ ಡಿ.ಕೆ. ಶಿವಕುಮಾರ ಹೋಗುತ್ತಾರೆ. ಸೌಜನ್ಯ ಭೇಟಿ ಅಂತ ಬರುತ್ತಾರೆ. ಇವರು ಸೌಜನ್ಯದ ಭೇಟಿ ಮಾಡುವುದಿಲ್ಲ. ಸಿಎಂ ಮಾಡಲಿಲ್ಲ ಎಂದರೆ ಬೊಮ್ಮಾಯಿ ಜತೆಗೆ ಮಾತಾಡಿದ್ದೇನೆ ಎಂದು ಸೋನಿಯಾ ಗಾಂ ಧಿಗೆ ಹೆದರಿಸುವ ಕೆಲಸ ಮಾಡುತ್ತಾರೆ. ಬೊಮ್ಮಾಯಿಯವರೇ ಅವರನ್ನು ನೀವು ಮನೆವರೆಗೂ ಬಿಟ್ಟುಕೊಳ್ಳಬೇಡಿ. ನಾವೇಕೆ ಅವರನ್ನು ಮುಖ್ಯಮಂತ್ರಿ ಮಾಡುವುದು ಎಂದು ಪ್ರಶ್ನಿಸಿದರು.

ಯಾವುದೇ ವಿರೋಧ ಪಕ್ಷದವರ ಜತೆಗೆ ಮಾತನಾಡುವುದಿಲ್ಲ, ಮನೆಗೆ ಹೋಗುವುದಿಲ್ಲ, ಅವರ ಮುಖವನ್ನೂ ನೋಡುವುದಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಅದೇ ರೀತಿಯಾಗಿ ನಾವೂ ಇನ್ನು ಮುಂದೆ ಸಿದ್ದರಾಮಯ್ಯ, ಡಿಕೆಶಿ ಮನೆಗೆ ಹೋಗುವುದಿಲ್ಲ, ಫೋನ್‌ ನಲ್ಲಿ ಮಾತನಾಡುವುದಿಲ್ಲ, ಹಲ್ಲು ಕಿಸಿಯುವುದಿಲ್ಲ ಅಂತಂದ್ರೆ ಮಾತ್ರ ನಮ್ಮ ಪಕ್ಷ ಉಳಿಯುತ್ತದೆ. ಇಲ್ಲದಿದ್ದರೆ ನೀವು ಸ್ವಾಗತ- ಸುಸ್ವಾಗತ ಎಂದರೆ ನಮ್ಮ ಕಾರ್ಯಕರ್ತರು ಮಲಗಿ ಬಿಡುತ್ತಾರೆ ಎಂದರು.

ಯತ್ನಾಳ ಮಾತಿಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ರಾಜಕಾರಣದಲ್ಲಿ ಎಂದಿಗೂ ನಾನು ರಾಜಿ ಮಾಡಿಕೊಂಡಿಲ್ಲ, ಮಾಡಿಕೊಳ್ಳುವುದೂ ಇಲ್ಲ. ಯಾರಾದರೂ ಮನೆಗೆ ಬರುವವರನ್ನು ಬೇಡ ಎನ್ನಲು ಆಗುವುದಿಲ್ಲ. ಅದು ನಮ್ಮ ಕರ್ನಾಟಕದ ಸೌಜನ್ಯ. ಅದರರ್ಥ ನಾವು ಎಲ್ಲಿಯೂ ರಾಜಿ ಆಗುವುದಿಲ್ಲ ಗೌಡ್ರೇ, ನೀವು ತಲೆ ಕೆಡಿಸಿಕೊಳ್ಳಬೇಡಿ. ಕೆಲವರು ಮನೆಗೆ ಹೋಗದೆಯೇ ಒಳಗೇ ರಾಜಿ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ನಾವು ಬಹಿರಂಗವಾಗಿ, ಸ್ಪಷ್ಟವಾಗಿದ್ದೇವೆ. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ, ಕಾರ್ಯಕರ್ತರು ಅಣ್ಣ-ತಮ್ಮಂದಿರರು, ಅಕ್ಕ-ತಂಗಿಯರ ಸಮಾನ. ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next