ಹೊಸದಿಲ್ಲಿ: ಕೋವಿಡ್ ಬಿಕ್ಕಟ್ಟಿನ ನಡುವೆ ದೇಶದಲ್ಲೇ ಮೊದಲ ಬಾರಿಗೆ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಈ ಚುನಾವಣೆಯಲ್ಲಿ ಸೋಂಕು ತಗಲದಂತೆ ಮತದಾನ ಮಾಡಲು ಮರದ ಕಡ್ಡಿಗಳು, ಖಾದಿ ಮಾಸ್ಕ್ ಗಳೇ ಪ್ರಮುಖ ಅಸ್ತ್ರಗಳಾಗಿ ಬಳಕೆಯಾಗಲಿವೆ.
ಬೂತ್‌ಗಳಲ್ಲಿ ಇವಿಎಂ ಯಂತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆ ಇರುವ ಬಟನ್ ಅನ್ನು ಕೈಯಿಂದ ಒತ್ತುವ ಬದಲು ಮರದ ಕಡ್ಡಿಯಿಂದ ಒತ್ತಲು ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತೀ ಮತದಾರನಿಗೂ ಸಣ್ಣ ಮರದ ಕಡ್ಡಿಯನ್ನು ನೀಡಲಾಗುವುದು. ಇದರಿಂದಲೇ ಇವಿಎಂ ಯಂತ್ರದಲ್ಲಿ ಬಟನ್ ಒತ್ತಬೇಕಿದೆ.
ಅಲ್ಲದೆ ಮಾಸ್ಕ್ ಧರಿಸದೆ ಬರುವ ಜನರಿಗೆ ನೀಡುವುದಕ್ಕಾಗಿ ಖಾದಿ ಬಟ್ಟೆಯಿಂದ ತಯಾರಿಸಿದ ಮೂರು ಪದರಗಳ ಮಾಸ್ಕ್ಗಳನ್ನು ಬೂತ್‌ನಲ್ಲೇ ದಾಸ್ತಾನು ಇರಿಸಲಾಗುವುದು. ಮತಗಟ್ಟೆಯಲ್ಲಿ ಕೈತೊಳೆಯುವ ವ್ಯವಸ್ಥೆ ಮತ್ತು ಬ್ಯಾಕ್ಟೀರಿಯಾ ನಿವಾರಕ ಗ್ಲೌಸ್‌ಗಳನ್ನೂ ಒದಗಿಸಲಾಗುತ್ತದೆ.
ಒಂದು ಮತಗಟ್ಟೆಯಲ್ಲಿ ಸಾವಿರ ಮಂದಿಗೆ ಮಾತ್ರ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಬಿಹಾರದಲ್ಲಿ ಈ ಬಾರಿ ಶೇ. 45 ಹೊಸ ಬೂತ್ ಗಳನ್ನು ತೆರೆಯಲಾಗುತ್ತದೆ. ಕೋವಿಡ್ ಪೀಡಿತರು, ಶಂಕಿತ ಸೋಂಕುಪೀಡಿತರು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.