Advertisement
ಪಕ್ಷಿ ವೀಕ್ಷಣೆಯ ಸಂದರ್ಭಗಳಲ್ಲಿ ಕೆಲವೊಂದು ಹಕ್ಕಿಗಳನ್ನು ನಾವು ನಿರೀಕ್ಷಿಸಿಯೇ ಇರುವುದಿಲ್ಲ, ನಾವು ನಿರೀಕ್ಷಿಸಿದ ಹಕ್ಕಿಗಳ ಬದಲು ಮತ್ತೂಂದು ಪ್ರತ್ಯಕ್ಷವಾಗಿರುತ್ತದೆ. ಅವತ್ತು ಹಾಗೆಯೇ ಆಗಿತ್ತು. ಫೆಬ್ರವರಿ ತಿಂಗಳ ಒಂದು ಸಂಜೆ ಚಳಿಗಾಲದಲ್ಲಿ ಆಗಮಿಸಿದ್ದ ವಲಸೆ ಹಕ್ಕಿಯೊಂದನ್ನು ಹುಡುಕಿ ಹೊರಟಿದ್ದೆ. ನಾವು ಹೋಗಿದ್ದ ಜಾಗದಲ್ಲಿ ಅದು ಸಿಗುವ ನಿರೀಕ್ಷೆಯೂ ನನಗಿರಲಿಲ್ಲ. ಆ ಜಾಗದ ಆಸುಪಾಸಿನಲ್ಲೇ ಈ ಮುದ್ದು ಮರಿ ಕಣ್ಣಿಗೆ ಬಿತ್ತು. ನಾನದನ್ನು ನಿರೀಕ್ಷಿಸಿಯೇ ಇರಲಿಲ್ಲ. ಸಾಕಷ್ಟು ಒಣಗಿದಂಥ ಖಾಲಿ ಕೊಂಬೆಯ ಮೇಲೆ ವಸಂತನ ಆಗಮನದ ಮುನ್ಸೂಚನೆಯಂತೆ ಎಲ್ಲಿಂದಲೋ ಧುತ್ತೆಂದು ಮರಕುಟಿಗ ಹಕ್ಕಿಯೊಂದು ಪ್ರತ್ಯಕ್ಷವಾಗಿ ಫೋಸ್ ಕೊಟ್ಟು ಮರೆಯಾಗಿತ್ತು. ಈಗ ನನ್ನ ಕ್ಯಾಮರಾಗೆ ಕೆಲಸ ಬಿತ್ತು. ಅದನ್ನು ಎತ್ತಿ ಬಟನ್ ಒತ್ತಿದ್ದೆ ಅಷ್ಟೆ. ಚಿತ್ರ ತೆಗೆಯುವಾಗ ಅಂಥ ಶ್ರಮ ವೇನೂ ಇರಲಿಲ್ಲ. ಸಲೀಸಾಗಿ ಸೆರೆಯಾಗಿತ್ತು. ನನ್ನ ಮತ್ತು ನನ್ನ ಕ್ಯಾಮರಾದ ಹೊಟ್ಟೆ ಅರ್ಧ ತುಂಬಿತ್ತು!
Related Articles
Advertisement
ಇದೇ ಜಾತಿಯ ಮರಕುಟಿಗ ಹಕ್ಕಿಯನ್ನು ಸುಮಾರು ಹತ್ತನ್ನೆರಡು ವರುಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ಪಕ್ಷಿ ಛಾಯಾಗ್ರಹಣ ಮುಗಿಸಿ ಹೊರಡುವ ಮುನ್ನ ಎತ್ತರದ ತೆಂಗಿನ ಮರವೊಂದರ ಮೇಲೆ ಮೊದಲು ನೋಡಿದ್ದೆ. ಅವುಗಳ ಚಿನ್ನಾಟವನ್ನು ಕಂಡಿದ್ದೆ. ಆಗಿನ್ನೂ ಈ ಹಕ್ಕಿಯನ್ನು ನೋಡಿದ ಹೊಸತು. ಹೆಚ್ಚಿನ ಮಾಹಿತಿ ಇರಲಿಲ್ಲ. ಅದರ ನಂತರ ನಾಲ್ಕೆçದು ಬಾರಿ ದೂರದಿಂದ ಕಂಡಿತ್ತು. ಸೆರೆಯೂ ಸಿಕ್ಕಿತ್ತು. ಆದರೆ, ನನ್ನ ಮತ್ತು ನನ್ನ ಕ್ಯಾಮರಾದ ಹೊಟ್ಟೆ ತುಂಬಿರಲಿಲ್ಲ. ಮರಕುಟಿಗ ಹಕ್ಕಿ ಈ ಬಾರಿ ತಂಪಾದ ಸಂಜೆಯಲಿ ಫೋಸ್ ಕೊಡಲೆಂದೇ ನನ್ನೆದುರು ಬಂದಿತ್ತು. ಚೆನ್ನಾಗಿ ಪೋಸ್ ಕೊಟ್ಟು ಮಿಂಚಿನಂತೆ ಮರೆಯಾಗಿತ್ತು. ಆ ಸಂಜೆ ನನಗಾಗೇ ಬಂದಂತಿತ್ತು. ಮನದೊಳಗೆ ಕವಿತೆಯೊಂದನ್ನು ತಂದಂತಿತ್ತು.
ಕುಟುಕುವುದೂ ಒಂದು ಕಲೆ! :
ಮರಕುಟುಕ ಜಾತಿಯ ಪಕ್ಷಿಗಳ ವೈವಿಧ್ಯತೆಯೇ ಬೇರೆ ತರಹ. ಮರಕುಟುಕ, ನೆಲಕುಟುಕ ತರಹದ ಹಕ್ಕಿಗಳ ಬಗ್ಗೆ ವಿಶೇಷ ಕುತೂಹಲ ನನಗೆ. ಕೈಗೆಟುಕದೆ ಮರವೇರಿ ಕೂರುವ ಮರಕುಟುಕ ಹಕ್ಕಿಗಳ ಫೋಟೋ ತೆಗೆಯುವುದಕ್ಕಿಂತ, ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೊದಲಿನಿಂದಲೂ ಇತ್ತು. ಸಾಮಾನ್ಯವಾಗಿ ಈ ಪ್ರಭೇದದ ಹಕ್ಕಿಗಳು ಮರ ಹತ್ತುವಾಗ ಕೆಳಗಿನಿಂದ ಮರದ ಮೇಲಕ್ಕೆ ಏರುತ್ತಾ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಕುಪ್ಪಳಿಸುತ್ತಾ, ತಲೆ ಹಣಕಿ ಹಾಕುತ್ತಾ ಮರ ಹತ್ತುತ್ತವೆ. ಒಂದಕ್ಕಿಂತ ಹೆಚ್ಚು ಹಕ್ಕಿಗಳಿದ್ದರೆ ಅವುಗಳ ಲಯಬದ್ದ ಕಣ್ಣಾಮುಚ್ಚಾಲೆ ಆಟವನ್ನು ನೋಡುವುದೇ ಚೆನ್ನ. ಮರಗಳನ್ನು ಕುಟ್ಟಲು ಅದರಲ್ಲೂ ಒಣಮರಗಳನ್ನು ಕುಟ್ಟಲು ಬಲವಾದ ಕೊಕ್ಕುಳ್ಳ ಈ ಹಕ್ಕಿ ಮರಗಳನ್ನು ಕುಟುಕಿ ಅದರೊಳಗಿನ ಹುಳುಗಳನ್ನು ಮುಖ್ಯವಾಗಿ ಗೆದ್ದಲುಗಳನ್ನು ಕುಟುಕಿ ತಿನ್ನುತ್ತವೆ. ಮರದ ತೊಗಟೆಯನ್ನು ಕೊಕ್ಕಿನಿಂದ ಸರಿಸಿದಾಗ ಒಳಗಿರುವ ಇರುವೆ, ಹುಳ, ಗೆದ್ದಲುಗಳು ಆಚೆ ಬರುತ್ತವೆ. ಅವು ಮರವನ್ನು ಕುಟುಕುವಾಗ ಮಧ್ಯದಲ್ಲಿ ಅಂತರ ಕೊಟ್ಟು ಕುಟುಕುವುದನ್ನು ಮುಂದುವರೆಸುತ್ತವೆ.
-ಚಿತ್ರ- ಲೇಖನ: ಎಂ. ಆರ್. ಭಗವತಿ