Advertisement

ಬಿರುಗಾಳಿಗೆ ಧರೆಗುರುಳಿದ ಮರ-ವಿದ್ಯುತ್‌ ಕಂಬಗಳು

01:42 PM Apr 28, 2019 | Suhan S |

ಬೆಳಗಾವಿ: ಬಿಸಿಲಿನ ತಾಪದಿಂದ ತತ್ತರಿಸಿದ್ದ ನಗರ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರ ಮಧ್ಯಾಹ್ನ ಬಿರುಗಾಳಿ-ಗುಡುಗು ಮಿಶ್ರಿತ ಭಾರೀ ಮಳೆ ಸುರಿದಿದ್ದು, ನೂರಾರು ಗಿಡ-ಮರಗಳು, ಅಲ್ಲಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿವೆ.

Advertisement

ಕಳೆದ ಒಂದು ವಾರದಿಂದ ಭಾರೀ ಬಿಸಿಲಿನ ತಾಪವಿತ್ತು. ಬಿಸಿಲಿನ ಧಗೆಯಿಂದ ಜನ ತತ್ತರಿಸಿದ್ದರು. ಶನಿವಾರ ಮಧ್ಯಾಹ್ನ ಚಂಡಮಾರುತದಂತೆ ಬೀಸಿದ ಗಾಳಿಯಿಂದ ಇಡೀ ನಗರವೇ ತತ್ತರಿಸಿತ್ತು. ಮಳೆ ಸುರಿದಿದ್ದರಿಂದ ತಂಪು ವಾತಾವರಣವಾದರೂ ಧಗೆ ಮಾತ್ರ ಕಡಿಮೆ ಆಗಿರಲಿಲ್ಲ. ಗಾಳಿಯ ರಭಸಕ್ಕೆ ಬೆಳಗಾವಿಯ ದಕ್ಷಿಣ ಹಾಗೂ ಉತ್ತರ ಭಾಗದಲ್ಲಿ ಅನೇಕ ಗಿಡ-ಮರಗಳು ನೆಲಕ್ಕುರುಳಿವೆ. ವಿದ್ಯುತ್‌ ಕಂಬಗಳೂ ಬಿದ್ದು ಜನರು ಪರದಾಡುವಂತಾಯಿತು. ಕೆಲವೊಂದು ಕಡೆಗೆ ವಿದ್ಯುತ್‌ ಕೈ ಕೊಟ್ಟಿದ್ದರಿಂದ ಜನ ರೋಸಿ ಹೋದರು.

ಪೀರನವಾಡಿಯ ಜನತಾ ಪ್ಲಾಟ್‌ನ ಮನೆಗಳ ಪತ್ರಾಸಗಳು ಹಾರಿ ಹೋಗಿವೆ. ದಕ್ಷಿಣ ಭಾಗದ ಚಿದಂಬರೇಶ್ವರ ನಗರ, ಆದರ್ಶ ನಗರ ಮೂರನೇ ಕ್ರಾಸ್‌ನಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಕೆಲವು ಮನೆಗಳ ಕಂಪೌಂಡ್‌ಗಳ ಮೇಲೂ ಕಂಬಗಳು ಬಿದ್ದಿವೆ. ವಡಗಾಂವ ಶ್ರೀ ಮಂಗಾಯಿ ದೇವಸ್ಥಾನ ಬಳಿ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದಿದೆ. ವಾಹನ ಸಂಪೂರ್ಣ ಜಖಂಗೊಂಡಿದೆ. ಭಾಗ್ಯ ನಗರ ನಾಲ್ಕನೇ ಕ್ರಾಸ್‌ನ ಮನೆ ಎದುರು ನಿಲ್ಲಿಸಿದ್ದ ಕಾರ್‌ ಮೇಲೆ ಮರ ಬಿದ್ದು ಕಾರಿನ ಗಾಜು ಪುಡಿ ಪುಡಿಯಾಗಿದೆ.

ಉದ್ಯಮಬಾಗ, ಮಚ್ಛೆ, ಪೀರನವಾಡಿಯಲ್ಲಿ ರಸ್ತೆಗಳ ಮೇಲೆ ಗಿಡಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಭಾಗ್ಯ ನಗರದ ಗುಲ್ಮೊಹರ್‌ ಕಾಲೋನಿಯಲ್ಲಿ ಗಿಡ ಹಾಗೂ ವಿದ್ಯುತ್‌ ಕಂಬ ಮನೆ ಆವರಣ ಗೋಡೆ ಮೇಲೆ ಬಿದ್ದಿವೆ. ನಗರದ ಬಹುತೇಕ ಕಡೆಗಳಲ್ಲಿ ಗಿಡ ಮರಗಳು ಬಿದ್ದಿದ್ದು ಅನಾಹುತಕ್ಕೆ ಕಾರಣವಾಗಿವೆ.

ಬೆಳಗಾವಿ ತಾಲೂಕಿನ ಸುಳೇಭಾವಿ, ಯದ್ದಲಬಾವಿಹಟ್ಟಿ, ಖನಗಾಂವ ಬಿ.ಕೆ., ಖನಗಾಂವ ಕೆ.ಎಚ್., ಚಂದೂರ, ಕಬಲಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಭಾರೀ ಮಳೆ ಸುರಿದಿದೆ. ಸುಳೇಭಾವಿ ಹಾಗೂ ಮಾರಿಹಾಳ ಠಾಣೆ ಎದುರಿರುವ ಬೃಹತ್‌ ಮರ ಧರೆಗುರುಳಿವೆ. ತಾಲೂಕಿನ ಅನೇಕ ಹಳ್ಳಿಗಳಲ್ಲಿ ಶನಿವಾರ ಸುರಿದ ಮಳೆ-ಗಾಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next