ಶ್ರೀನಗರ : ಕಣಿವೆಯಲ್ಲಿ ಕಾಶ್ಮೀರ ಪಂಡಿತರ ಹತ್ಯೆಗಳು ಮುಂದುವರಿದಿದ್ದು, ಈ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸದ ಫಾರೂಕ್ ಅಬ್ದುಲ್ಲಾ ಅವರು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದು, ‘ಆರ್ಟಿಕಲ್ 370 ತೆಗೆದು ಹಾಕಲಾಗಿದೆ ಆದರೂ ಹತ್ಯೆಗಳು ನಡೆಯುತ್ತಿವೆ’ ಎಂದು ಪಕ್ಷದ ಹೆಸರು ಹೇಳದೆ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ.
ಜಮ್ಮು ವಿಭಾಗದ ಜಿಲ್ಲಾ ರಿಯಾಸಿ ಪ್ರವಾಸದ ವೇಳೆ ಮಾಧ್ಯಮದವರೊಂದಿಗೆ ಸಂವಾದ ನಡೆಸಿ, ”ನ್ಯಾಯ ಸಿಗುವವರೆಗೂ ಹತ್ಯೆಗಳು ನಿಲ್ಲುವುದಿಲ್ಲ, ಬಿಜೆಪಿಯವರು 370 ನೇ ವಿಧಿಯಿಂದಾಗಿ ಇಂತಹ ಹತ್ಯೆಗಳು ನಡೆಯುತ್ತಿವೆ ಎಂದು ಹೇಳುತ್ತಿದ್ದರು. ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ, ಆದರೆ ಹತ್ಯೆಗಳ ಪ್ರಕ್ರಿಯೆ ಏಕೆ ನಿಲ್ಲುತ್ತಿಲ್ಲ.ಇದಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.
”ಕಾಶ್ಮೀರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ಸರಕಾರ ಹೇಳುತ್ತಿದೆ, ಆದರೆ ಪರಿಸ್ಥಿತಿ ಎಲ್ಲಿ ಉತ್ತಮವಾಗಿದೆ? ಕಾಶ್ಮೀರಿ ಪಂಡಿತನನ್ನು ಏಕೆ ಕೊಂದರು?” ಎಂದು ಪ್ರಶ್ನಿಸಿದರು.
ಶೋಪಿಯಾನ್‌ನಲ್ಲಿ ಶನಿವಾರ 56 ವರ್ಷದ ಕಾಶ್ಮೀರ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದ ಬೆನ್ನಲ್ಲೇ ಫಾರೂಕ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ.
ಫಾರೂಕ್ ಅಬ್ದುಲ್ಲಾ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.