ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಹೊಸ ಪಕ್ಷವನ್ನು ನೋಡಬಯಸಿದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆರೋಗ್ಯ ಸಮಸ್ಯೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ತಾನು ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುತ್ತಿಲ್ಲ ಎಂದು ರಜಿನಿಕಾಂತ್ ಹೇಳಿದ್ದಾರೆ.
ಈ ಬಗ್ಗೆ ಸ್ವತಃ ರಜಿನಿಕಾಂತ್ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಸುದೀರ್ಘ ಮೂರು ಪುಟದ ಪತ್ರವನ್ನು ಪ್ರಕಟಿಸಿರುವ ಅವರು ತಮ್ಮ ನಿರ್ಧಾರಕ್ಕೆ ಅನಾರೋಗ್ಯದ ಕಾರಣ ನೀಡಿದ್ದಾರೆ.
ಕಳೆದ ಶುಕ್ರವಾರ (ಡಿ.25) ದಂದು ರಕ್ತದೊತ್ತಡ ಸಮಸ್ಯೆಗೆ ಸಿಲುಕಿದ್ದ ರಜಿನಿಕಾಂತ್ ಅವರನ್ನು ಹೈದರಾಬಾದ್ ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ರಜಿನಿಕಾಂತ್ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಡಿಸೆಂಬರ್ 31ರಂದು ಹೊಸ ರಾಜಕೀಯ ಪಕ್ಷದ ಬಗ್ಗೆ ಮಹತ್ವದ ಘೋಷಣೆಯನ್ನು ಮಾಡುತ್ತೇನೆ ಎಂದು ರಜಿನಿಕಾಂತ್ ಈ ಹಿಂದೆ ಹೇಳಿದ್ದರು. ಪ್ರತಿಯೊಂದರಲ್ಲೂ ಬದಲಾವಣೆ ತರೋಣ. ಪ್ರಾಮಾಣಿಕ, ಪಾರದರ್ಶಕ, ಆಧ್ಯಾತ್ಮಿಕ ರಾಜಕೀಯ ಮಾಡೋಣ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲುವು ಸಾಧಿಸುತ್ತೇವೆ ಎಂದು ರಜಿನಿ ಹೇಳಿದ್ದರು.