ಹೊಸದಿಲ್ಲಿ : ‘2019ರ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ; ಅಯೋಧ್ಯಾ ರಾಮ ಮಂದಿರ ಮತ್ತು ಗಂಗಾ ಶುದ್ದೀಕರಣ ವಿಷಯದಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
2019 ಲೋಕಸಭಾ ಚುನಾವಣೆಗೆ ತಾನು ಆರೋಗ್ಯದ ಕಾರಣಕ್ಕೆ ಸ್ಪರ್ಧಿಸುವುದಿಲ್ಲ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಈಚೆಗಷ್ಟೇ ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.
ಅವರ ಬಳಿಕ ಈಗ ಉಮಾ ಭಾರತಿ ತಮ್ಮ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಇಬ್ಬರು ಜನಪ್ರಿಯ ನಾಯಕಿಯರು ಲೋಕಸಭೆಗೆ ಸ್ಪರ್ಧಿಸದಿರಲು ನಿರ್ಧರಿಸಿರುವುದು ಬಿಜೆಪಿಗೆ ದೊಡ್ಡ ಹೊಡೆತವಾದೀತೇ ಎಂಬ ಪ್ರಶ್ನೆ ಈಗ ಚರ್ಚೆಯ ವಿಷಯವಾಗಿದೆ.
“ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿಲ್ಲ. ಇದು ತಾತ್ಕಾಲಿಕ ನಿವೃತ್ತಿ. ಇದಕ್ಕಾಗಿ ನಾನು ಬಿಜೆಪಿ ವರಿಷ್ಠ ನಾಯಕರ ಅನುಮತಿ ಕೋರಿದ್ದೇನೆ’ ಎಂದು ಉಮಾ ಭಾರತಿ ಹೇಳಿದ್ದಾರೆ.
‘ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ದಿಶೆಯಲ್ಲಿ ಧನಾತ್ಮಕ ವಾತಾವರಣವನ್ನು ರೂಪಿಸುವ ಅಗತ್ಯವಿದೆ. ಇದನ್ನು ಮಾಡಿದಾಗ ಸರಕಾರಕ್ಕೆ ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ತರಲು ಅನುಕೂಲವಾಗುತ್ತದೆ; ಆದುದರಿಂದ ನಾನು ತಾತ್ಕಾಲಿಕವಾಗಿ ಸಕ್ರಿಯ ರಾಜಕಾರಣದಿಂದ ದೂರವಿದ್ಧು ರಾಮ ಮಂದಿರ ನಿರ್ಮಾಣ ಮತ್ತು ಗಂಗಾ ಶುದ್ದೀಕರಣ ವಿಷಯದಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ಉಮಾ ಭಾರತಿ ಹೇಳಿದರು.
‘2019ರ ಜನವರಿಯಿಂದ ನಾನು ಒಂದು-ಒಂದೂವರೆ ವರ್ಷ ಕಾಲಾವಧಿಯ ಗಂಗಾ ಯಾತ್ರೆಯಲ್ಲಿ ತೊಡಗುತ್ತೇನೆ; ಈ ಅವಧಿಯಲ್ಲಿ ನಾನು ವಿವಿಧೆಡೆಯ ಗಂಗಾ ತಟದಲ್ಲಿ ವಾಸವಿರುತ್ತೇನೆ. ನನ್ನ ಈ ಹಂಬಲವನ್ನು ನಾನು ಬಿಜೆಪಿ ವರಿಷ್ಠ ನಾಯಕರಿಗೆ ತಿಳಿಸಿ ಅವರ ಅನುಮತಿ ಕೋರಿದ್ದೇನೆ’ ಎಂದು ಉಮಾ ಭಾರತಿ ಹೇಳಿದರು.