ಅಮೃತಸರ: ಪಂಜಾಬ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಿ ಬೆದರಿಕೆ ಹಾಕಿದ್ದ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಮಾನ್, ದೆಹಲಿ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಲು ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅವರ ಸಹವರ್ತಿಗಳು ಏಕೆ ಮೌನವಾಗಿದ್ದಾರೆ ಎಂದು ಮಾನ್ ಪ್ರಶ್ನಿಸಿದ್ದಾರೆ.
“ಆಯ್ಕೆಯಾದ ರಾಜ್ಯಪಾಲರಿಗೆ ಜನರ ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆ ಹಾಕುವ ಯಾವುದೇ ನೈತಿಕ ಅಧಿಕಾರವಿಲ್ಲ”ಎಂದು ಮಾನ್ ಹೇಳಿದ್ದು, ನಾವು ತಲೆ ಬಾಗುವುದಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
“ಆರ್ಟಿಕಲ್ 356 ರ ಕಾರಣದಿಂದಾಗಿ ಪಂಜಾಬ್ ಹೆಚ್ಚು ಪರಿಣಾಮ ಬೀರಿದೆ. ಆದ್ದರಿಂದ, ನಮ್ಮ ಗಾಯಗಳ ಮೇಲೆ ಉಪ್ಪನ್ನು ಸವರಬೇಡಿ… ಗವರ್ನರ್ ಸಾಹೇಬರೇ ಪಂಜಾಬಿಗಳ ತಾಳ್ಮೆ ಮತ್ತು ಭಾವನೆಗಳನ್ನು ಪರೀಕ್ಷಿಸಲು ಪ್ರಯತ್ನಿಸಬೇಡಿ,” ಮಾನ್ ಹೇಳಿದ್ದಾರೆ.
ತಮ್ಮ ಅಧಿಕಾರವನ್ನು ಧಿಕ್ಕರಿಸಿ ತಾನು ಕಳುಹಿಸಿದ ಪತ್ರಗಳಿಗೆ ಸಿಎಂ ಮಾನ್ ಪ್ರತಿಕ್ರಿಯಿಸುತ್ತಿಲ್ಲ ಎಂದು ರಾಜ್ಯಪಾಲರು ಆರೋಪಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತೇನೆ, ತಮ್ಮ ಪತ್ರಗಳಿಗೆ ಉತ್ತರಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದರು.