Advertisement

ಫೇಸ್ ಮಾಸ್ಕ್ ಧರಿಸದಿದ್ದರೆ ‘ಮದ್ಯ’ದಂಗಡಿಗೆ ನೋ ಎಂಟ್ರಿ …ಇಂದಿನಿಂದ ನಿಯಮ ಜಾರಿ  

08:26 PM Apr 01, 2021 | Team Udayavani |

ರಾಯ್ಪುರ : ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಛತ್ತೀಸ್ ಗಢ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು, ಇಂದಿನಿಂದ (ಏಪ್ರಿಲ್ 1) ಫೇಸ್ ಮಾಸ್ಕ್ ಧರಿಸದವರಿಗೆ ಮದ್ಯ ಮಾರಾಟ ನಿಷೇಧಿಸಿದೆ.

Advertisement

ಹೌದು, ದೇಶಾದ್ಯಂತ ಕೋವಿಡ್‍ 19 ಎರಡನೇ ಅಲೆಯ ಆತಂಕ ಶುರುವಾಗಿದೆ. ಕೋವಿಡ್ ಸಕ್ರಿಯ ಪ್ರಕರಣಗಳ ಹೆಚ್ಚಳ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಮಿತಿಮೀರಿ ಹರಡುತ್ತಿರುವ ಕೋವಿಡ್ ಸೋಂಕು ಹತೋಟಿಗೆ ತರಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಆದೇಶ ಹೊರಡಿಸಿವೆ.

ಛತ್ತೀಸ್ ಗಢ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿ ಜಾರಿಗೆ ತಂದಿದೆ. ರಾಜ್ಯದ ಎಲ್ಲಾ ಕಡೆ ಮದ್ಯದಂಗಡಿಗೆ ಹೋಗುವವರು ಕಡ್ಡಾಯವಾಗಿ ಫೇಸ್ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗಬೇಕು. ಕೋವಿಡ್-19 ಮಾರ್ಗಸೂಚಿ ಪಾಲಿಸಲು ಪ್ರತಿ ಲಿಕ್ಕರ್ ಶಾಪ್ ಗೆ ರಾಜ್ಯ ಸರ್ಕಾರ 10 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಸರ್ಕಾರದ ಆದೇಶವನ್ನು ಪಾಲಿಸಲಾಗುತ್ತಿದೆಯೇ, ಸ್ಯಾನಿಟೈಸರ್, ಮಾಸ್ಕ್ ಬಳಸುತ್ತಿದ್ದಾರೆಯೇ, ಮದ್ಯದಂಗಡಿ ಆವರಣದಲ್ಲಿ ಸ್ವಚ್ಛತೆ ಕಾಪಾಡಲಾಗಿದೆಯೇ ಎಂದು ಖಚಿತಪಡಿಸಲು ಪ್ರತಿ ಜಿಲ್ಲೆಯಲ್ಲಿ ತಪಾಸಣಾ ದಳವನ್ನು ನೇಮಿಸಲಾಗುತ್ತದೆ.

ಆಯಾ ಜಿಲ್ಲೆಯಲ್ಲಿ ತಂಡವು ಪ್ರತಿದಿನ ಕನಿಷ್ಠ ಐದು ಬಾರಿ ಪ್ರತಿ ಮದ್ಯದಂಗಡಿಗೆ ಕಡ್ಡಾಯವಾಗಿ ಭೇಟಿ ನೀಡಲಿದೆ, ಹೊಸ ಮಾರ್ಗಸೂಚಿಗಳ ಅನುಸರಣೆ ಕುರಿತು ವರದಿಯನ್ನು ಛತ್ತೀಸ್ ಗಢ ರಾಜ್ಯ ಮಾರುಕಟ್ಟೆ ನಿಗಮ ನಿಯಮಿತದ ಪ್ರಧಾನ ಕಚೇರಿಗೆ ಕಳುಹಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next