Advertisement

ತಂಬಿಗೆ ನೀರಿಗೂ ಪರದಾಟ

12:31 PM May 22, 2019 | Suhan S |

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ತಿಮ್ಮಸಾಗರ ಗ್ರಾಮದಲ್ಲಿ, ತಂಬಿಗೆ ನೀರಿಗೂ ಜನ ಪರದಾಡುವ ಪರಿಸ್ಥಿತಿ ಉಂಟಾಗಿದೆ.

Advertisement

ಹೌದು, ಕಳೆದ ವಾರವಷ್ಟೇ ಜಿಲ್ಲೆಗೆ ಬಂದಿದ್ದ ಕಂದಾಯ ಸಚಿವರು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸಲು ನಿರ್ಲಕ್ಷ್ಯ ತೋರಬೇಡಿ ಎಂದು ತಿಳಿಸಿದ್ದರು. ಜಾನುವಾರುಗಳಿಗೆ ನೀರು, ಮೇವು ಕಡ್ಡಾಯವಾಗಿ ಕೊಡಬೇಕು. ನೀರು, ಮೇವಿಗಾಗಿ ಎಷ್ಟೇ ಖರ್ಚಾದರೂ ಪರವಾಗಿಲ್ಲ. ಸಮರ್ಪಕವಾಗಿ ಬರ ನಿರ್ವಹಿಸಬೇಕು ಎಂಬ ಸೂಚನೆ ಕೊಟ್ಟರೂ, ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.

ಕೊಡ ನೀರಿಗೆ ಅರ್ಧ ಕಿ.ಮೀ ನಡಿಗೆ: ಬಾದಾಮಿ ತಾಲೂಕು ಕೆಲವಡಿ ಗ್ರಾಪಂ ವ್ಯಾಪ್ತಿಯ ತಿಮ್ಮಸಾಗರ ಸುಮಾರು 1100ಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದು, 2800ರಿಂದ 3 ಸಾವಿರ ಜನಸಂಖ್ಯೆ ಇದೆ. ಇಡೀ ಗ್ರಾಮಕ್ಕೆ ಒಂದು ಕೊಳವೆ ಬಾವಿ ಇದ್ದು, ಅದರಲ್ಲಿ ಸದ್ಯ ನೀರು ಕಡಿಮೆಯಾಗಿದೆ. ಅಲ್ಲದೇ 1934ರ ಬ್ರಿಟಿಷರ ಕಾಲದ ತೆರೆದ ಬಾವಿ ಇದ್ದು, ಸಧ್ಯ ಇದೇ ತೆರೆದ ಬಾವಿ, ಇಡೀ ಗ್ರಾಮಸ್ಥರ ಕುಡಿಯುವ ನೀರಿನ ದಾಹ ನೀಗಿಸುತ್ತಿದೆ.

ಒಂದು ತೆರೆದ ಬಾವಿ, ಒಂದು ಕೊಳವೆ ಬಾವಿ ಹೊರತುಪಡಿಸಿದರೆ, ಪಕ್ಕದ ಕಟಗೇರಿ ಗ್ರಾಮದಿಂದ ಪೈಪ್‌ಲೈನ್‌ ಮೂಲಕ ಕುಡಿಯುವ ನೀರಿನ ಯೋಜನೆ ಕೈಗೊಂಡರೂ, ಅದು ನೀರಿನ ಅಭಾವದಿಂದ ಪ್ರತಿ 15 ದಿನಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದೆ. ಹೀಗಾಗಿ ಗ್ರಾಮಸ್ಥರು, ಊರ ಹೊರಗೆ ಅರ್ಧ ಕಿ.ಮೀ. ದೂರದಲ್ಲಿ ಇರುವ ತೆರೆದ ಬಾವಿಗೆ ತೆರಳಿ, ಅಲ್ಲಿಂದ ಹಗ್ಗದ ಸಹಾಯದ ಮೂಲಕ ಕೊಡ ನೀರು ತುಂಬಿಕೊಂಡು ಬರುತ್ತಾರೆ.

ಇಡೀ ಊರಿಗೆ ಬಾವಿ ಆಸರೆ: ಬ್ರಿಟಿಷರ ಕಾಲದಲ್ಲಿ 1934ರಲ್ಲಿ ಊರ ಹೊರಗೆ ತೆರೆದ ಬಾವಿ ತೋಡಿದ್ದು, ಈ ಬಾವಿಗೆ ಎಂದೂ ನೀರು ಬತ್ತಿಲ್ಲ. ಈ ಬಾವಿಯ ಸುತ್ತಲು ನೈಸರ್ಗಿಕ ಗುಡ್ಡಗಳಿದ್ದು, ಅಲ್ಲಿ ಸುರಿಯುವ ಮಳೆಯ ಪ್ರಮಾಣದಿಂದ ಈ ಬಾವಿಯ ನೀರು ಮತ್ತಷ್ಟು ಹೆಚ್ಚಾಗುತ್ತದೆ. ಅಲ್ಲದೇ ಬಾವಿಯ ನೀರು ಅತ್ಯಂತ ಸಿಹಿಯಾಗಿದ್ದು, ಅದಕ್ಕಾಗಿಯೇ ಸಿಹಿಬಾವಿ ನೀರು ಎಂದೂ ಗ್ರಾಮಸ್ಥರು ಕರೆಯುತ್ತಾರೆ. ಗ್ರಾಮದ ಕೊಳವೆ ಬಾವಿಯಿಂದ ಬರುವ ನೀರು ಅಷ್ಟೊಂದು ಸಿಹಿಯಾಗಿಲ್ಲ. ಹೀಗಾಗಿ ಗ್ರಾಮಸ್ಥರು, ಸಿಹಿಬಾವಿ ನೀರನ್ನೇ ಅವಲಂಬಿಸಿದ್ದಾರೆ.

Advertisement

ನೀರು ತರುವುದೇ ದೊಡ್ಡ ಚಿಂತೆ: ಪ್ರತಿ ಬೇಸಿಗೆಯಲ್ಲಿ ಈ ಗ್ರಾಮಸ್ಥರಿಗೆ ನೀರಿನದ್ದೇ ದೊಡ್ಡ ಚಿಂತೆಯಾಗುತ್ತದೆ. ಅದರಲ್ಲೂ ಜಾನುವಾರು, ಕುರಿ, ಮೇಕೆಗಳಿಗೆ ಕುಡಿಯುವ ನೀರು ಕಲ್ಪಿಸುವುದು ದೊಡ್ಡ ಸವಾಲಾಗಿದೆ. ಮನುಷ್ಯರಾದರೆ, ಎಲ್ಲಿಂದಲೋ ತಂದು ನೀರು ಕುಡಿಯುತ್ತಾರೆ. ಆದರೆ, ಜಾನುವಾರುಗಳಿಗೆ ಹೇಗೆ ಎಂಬ ಚಿಂತೆ ಗ್ರಾಮಸ್ಥರದ್ದು. ಹೀಗಾಗಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೊಳ್ಳಿ ಎಂಬ ಗ್ರಾಮಸ್ಥರ ಒತ್ತಾಯಕ್ಕೆ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸ್ಪಂದಿಸಿ, 33 ಲಕ್ಷ ವಿಶೇಷ ಅನುದಾನ ಕಲ್ಪಿಸಿದ್ದಾರೆ.

ಅರಣ್ಯ ಇಲಾಖೆ ಅಡ್ಡಿ: ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಡಿ 33 ಲಕ್ಷ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ತಿಮ್ಮಸಾಗರ, ಕೆಲವಡಿ ಮಧ್ಯೆ ಒಂದು ಸಂಪ್‌ ನಿರ್ಮಾಣ ಮಾಡಬೇಕಿದೆ. ಖಾಸಗಿ ವ್ಯಕ್ತಿಗಳು ಭೂಮಿ ಕೊಡುತ್ತಿಲ್ಲ.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಾಮಿ, ಕೆರೂರ ಪಟ್ಟಣ ಹಾಗೂ 18 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಯ 220 ಕೋಟಿ ಯೋಜನೆಯಡಿ ತಿಮ್ಮಸಾಗರ ಗ್ರಾಮವನ್ನೂ ಅಳವಡಿಸಿದ್ದು, ಈ ಯೋಜನೆ ಪೂರ್ಣಗೊಂಡಲ್ಲಿ, ತಿಮ್ಮಸಾಗರ ಗ್ರಾಮಸ್ಥರ ನೀರಿನ ಬವಣೆ ನೀಗಲಿದೆ.

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next