Advertisement

ಬಡಲಿಂಗ ಶಿವಾಲಯ

12:55 PM Aug 04, 2018 | |

ನಮ್ಮ ರಾಜ್ಯದಲ್ಲಿ ಶಿವನಿಗೆ ಸಮರ್ಪಿತವಾದ ಸಾಕಷ್ಟು ವಿಶೇಷ ದೇವಾಲಯಗಳಿವೆ. ಅವುಗಳಲ್ಲಿ ನಮ್ಮ ಐತಿಹಾಸಿಕ ನಗರವಾದ ಹಂಪಿಯಲ್ಲಿ ಇರುವ ಬಡಲಿಂಗ ಅದ್ಭುತ ಶಿವನ ದೇವಸ್ಥಾನ ಎನ್ನುವುದರಲ್ಲಿ ಎರಡು ಮಾತಿಲ್ಲ. 
ಇದು ನರಸಿಹಂ ದೇವಾಲಯದ ಪಕ್ಕದಲ್ಲಿ ಇದೆ. 

Advertisement

ಇಡೀ ದೇವಾಲಯ ಕಲ್ಲುಗಳಿಂದ ನಿರ್ಮಿತವಾಗಿದೆ. ಮಧ್ಯೆ ಶಿವನ ಲಿಂಗ. ಅದರ ಮೇಲೆ ತೆರೆದ ಚಾವಣಿ ಇದೆ. ಮಳೆ ಬಂದರೆ ಅಭಿಷೇತಕ ರೀತಿಯಲ್ಲಿ ನೀರು ಶಿವನ ವಿಗ್ರಹದ ಮೇಲೆ ಬೀಳುತ್ತದೆ. ಶತ, ಶತಮಾನದಿಂದಿರುವ ಕಲ್ಲುಗಳೇ ದೇವಾಲಯಕ್ಕೆ ವಿಶಿಷ್ಟವಾದ ಕಳೆ ತಂದು ಕೊಟ್ಟಿದೆ. 

ಈ ದೇವಸ್ಥಾನದಲ್ಲಿ ಲಿಂಗ ರೂಪದಲ್ಲಿ ಶಿವನನ್ನು ಪೂಜಿಸಲಾಗುತ್ತಿದೆ. ವರ್ಷಪೂರ್ತಿ ಪ್ರವಾಸಿಗರು ಮತ್ತು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಏಕಶಿಲೆಯ ಶಿವಲಿಂಗ. ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಮೂರು ಕಣ್ಣಿನ ಗುರುತುಗಳು ಕಾಣುತ್ತವೆ.  ಸುಂದರವಾದ ಲಿಂಗವನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದ್ದು, 3 ಮೀಟರ್‌ ಎತ್ತರವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದ ಈ ದೇವಾಲಯ ಅಸ್ತಿತ್ವದಲ್ಲಿದೆ ಎಂದು ಇತಿಹಾಸ ಹೇಳುತ್ತಿದೆ. 

ಸ್ಥಳ ಪುರಾಣ 
ಇನ್ನು ಪುರಾಣದ ಪ್ರಕಾರ ಈ ದೇವಸ್ಥಾನಕ್ಕೆ  ಬಡಲಿಂಗ ಎಂಬ ಹೆಸರು ಬಂದಿದಿರುವುದು ಬಡವ ಮತ್ತು ಲಿಂಗ ಎಂಬ ಎರಡು ಪದಗಳ ಸಂಯೋಜನೆಯಿಂದ. ದೇವಸ್ಥಾನದೊಳಗೆ ಇರಿಸಲಾಗಿರುವ ಶಿವಲಿಂಗವನ್ನು ಬಡತ  ರೈತ ಮಹಿಳೆ ಸ್ಥಾಪಿಸಿದಳು ಎಂಬುದು ಪುರಾಣದಿಂದ ತಿಳಿದುಬರುತ್ತದೆ.  ಆದ್ದರಿಂದ ದೇವಾಲಯವು ಬಡಲಿಂಗ ದೇವಸ್ಥಾನ ಎಂದು ಕರೆಯುತ್ತಾರೆ. 

Advertisement

 ಈ ದೇವಸ್ಥಾನವು ಸಾಕಷ್ಟು ಆಶ್ಚರ್ಯಕರ ಸಂಗತಿಗಳ ಬೀಡಾಗಿದೆ.  ಒಂದು ಪುಟ್ಟದಾಗಿ ಸಂಪೂರ್ಣ ಕಲ್ಲಿನಿಂದ ಕೂಡಿದ ಕೊಠಡಿಯಲ್ಲಿ  ಈ ಬೃಹದಾಕಾರದ ಶಿವಲಿಂಗವನ್ನು ನಿರ್ಮಿಸಲಾಗಿದೆ.  ಇದಕ್ಕೆ ಒಂದೇ ಒಂದು ಚಿಕ್ಕದಾದ ಬಾಗಿಲನ್ನು ನಿರ್ಮಿಸಲಾಗಿದ್ದು, ಇಲ್ಲಿಗೆ ಬರುವ ಭಕ್ತರು ಈ ಬಾಗಿಲಿನ ಮುಖಾಂತರವೇ  ಗರ್ಭಗುಡಿಯನ್ನು  ಪ್ರವೇಶಿಸಬೇಕು.  ಇನ್ನು, ಈ ಕಲ್ಲಿನ ಕೊಠಡಿಯ ವಿನ್ಯಾಸದ ಬಗ್ಗೆ ಗಮನಿಸಬೇಕಾದ ಆಸಕ್ತಿದಾಯಕ ವಿಷಯವೊಂದಿದೆ.  ಅದೇನೆಂದರೆ ಈ ದೇವಸ್ಥಾನ ಛಾವಣಿಯನ್ನೇ ಹೊಂದಿಲ್ಲ. ಹಗಲಿನಲ್ಲಿ, ಸೂರ್ಯನ ಬೆಳಕು ಛಾವಣಿಯ ಮೂಲಕ ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸುವುದನ್ನು ನೋಡಲು ಎರಡು ಕಣ್ಣು ಸಾಲದು.   ಹೀಗೆ ಸೂರ್ಯನ ರಶ್ಮಿ ನೇರವಾಗಿ ಶಿವಲಿಂಗದ  ಬೀಳುವುದರಿಂದ ಲಿಂಗ ಹೊಳಪನ್ನು ಪಡೆದಿದೆ.  ಶಿವಲಿಂಗವು ವೃತ್ತಾಕಾರದ ದೊಡ್ಡ ಪೀಠವನ್ನು ಹೊಂದಿದ್ದು, ಈ ಪೀಠವು  ಸದಾ ನೀರಿನಿಂದ ತುಂಬಿರುತ್ತದೆ. ಈ ನೀರು ಪವಿತ್ರ ಗಂಗಾನದಿಯಿಂದ ಬಂದಿರಬಹುದು ಎಂಬುದು ಭಕ್ತರ ಅನಿಸಿಕೆ ಮತ್ತು ನಂಬಿಕೆ.

ಕಾಲಮಾನದ ಹೊಡೆತಕ್ಕೆ ಸಿಲುಕಿ ಸಾಕಷ್ಟು ಏಳು ಬೀಳುಗಳನ್ನು   ಕಂಡಿರುವ  ಈ ಬಡಲಿಂಗ ದೇವಸ್ಥಾನ ಇದೂವರೆಗೆ  ಗಟ್ಟಿಯಾಗಿ ನಿಂತಿರುವುದಕ್ಕೆ ಕಾರಣ ಇದರ ಕಲ್ಲುಗಳಿಂದ ನಿರ್ಮಿತವಾಗಿರುವ ವಿನ್ಯಾಸ, ಕಟ್ಟಡ ತಂತ್ರಗಾರಿಕೆ ಹಾಗೂ ಅದ್ಭುತ ಶಿಲ್ಪಕಲೆ.  ಅಷ್ಟೇ ಅಲ್ಲ, ಇಲ್ಲಿರುವ ಬೃಹದಾಕಾರದ ಶಿವಲಿಂಗ ಕೂಡ ಇನ್ನೂ  ಗಟ್ಟಿಮುಟ್ಟಾಗಿದೆ. ಕಾರಣ, ಪ್ರಕೃತಿ ಪೂಜೆ ಇಲ್ಲಿ ನಡೆಯುತ್ತದೆ. ವಾರದ ಎಲ್ಲಾ  ದಿನಗಳಲ್ಲಿ ಸಂಜೆ 5:00 ರಿಂದ 9:00 ರವರೆಗೆ ತೆರೆದಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.  ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ರಾಜ್ಯದಲ್ಲಿರುವ ಎತ್ತರ ಶಿವಲಿಂಗಗಳ ಪಟ್ಟಿಯಲ್ಲಿ ಇದೂ ಒಂದು.  ಇಲ್ಲಿಗೆ ಬರುವ  ಭಕ್ತಾದಿಗಳು ಹತ್ತಿರದಲ್ಲಿಯೇ ಇರುವ ವಿಜಯಠಲ ದೇವಸ್ಥಾನ, ನವಬೃಂದಾವನ, ಆಂಜನೇಯ ದೇವಸ್ಥಾನ, ವಿರೂಪಾಕ್ಷ$ ದೇವಸ್ಥಾನಕ್ಕೂ ಭೇಟಿ ನೀಡಬಹುದು.   

ತಲುಪುವ ಮಾರ್ಗ 
ದೇಶದ ಪ್ರಮುಖ ನಗರಗಳಿಂದ ಹಂಪಿ ಪಟ್ಟಣಕ್ಕೆ ಸಾಕಷ್ಟು ಬಸ್‌ ಹಾಗೂ ರೈಲು ಸಂಪರ್ಕವಿದೆ.  ಹಂಪಿಯ ಹತ್ತಿರದ ರೈಲು ನಿಲ್ದಾಣ ಹೊಸಪೇಟೆ.  ಹೊಸಪೇಟೆಯಿಂದ ಬಸ್‌, ಟ್ಯಾಕ್ಸಿಗಳ ಮೂಲಕ  ಹಂಪಿ ತಲುಪಬಹುದು. ಇಲ್ಲಿ ನರಸಿಂಹ ದೇವಾಲಯದ ಬಳಿಯೇ ಬಡಲಿಂಗ ದೇವಾಲಯವಿದೆ. 

ಆಶಾ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next