ಕೋವಿಡ್- 19 ವೈರಸ್ ನಿಯಂತ್ರಣ ಕ್ರಮದ ಹಿನ್ನೆಲೆಯಲ್ಲಿ ಹಳಿ ತಪ್ಪಿರುವ ಆರ್ಥಿಕತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಿಸಿರುವುದು ಆಕರ್ಷಕವಾಗಿದೆ. ಅವರ ಆಶಯದಂತೆಯೇ ಕಾರ್ಯಗತಗೊಳಿಸುವ ಪ್ರಯತ್ನ ನಡೆದಿದ್ದರೆ ಇದೊಂದು ಅದ್ಭುತ ಕೊಡುಗೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಕಂತಾಗಿ 6 ಲಕ್ಷ ಕೋಟಿ ರೂ. ಪರಿಹಾರದಡಿ ಸಣ್ಣ ಉದ್ದಿಮೆಗಳ ಸಂಬಂಧ ಪ್ರಕಟಿಸಿರುವ ಉಪಕ್ರಮಗಳಲ್ಲಿ ಪ್ರಧಾನಿಯವರ ಮೂಲ ಆಶಯ ಪ್ರತಿಬಿಂಬಿತವಾಗುತ್ತಿಲ್ಲ.
ಹಾಗಾಗಿ ಎಂಎಸ್‌ಎಂಇಗಳಿಗೂ ಹೆಚ್ಚಿನ ಪ್ರಯೋಜನವಾಗದಂತಾಗಿದೆ. ಸಚಿವರು ಪ್ರಕಟಿಸಿರುವ ಉಪಕ್ರಮದಲ್ಲಿ ಕೆಲ ಉಪಯುಕ್ತ ಅಂಶಗಳಿವೆ. ಮುಖ್ಯವಾಗಿ ಎಂಎಸ್ ಎಂಇ ಉದ್ಯಮದ ವರ್ಗೀಕರಣ ವ್ಯಾಖ್ಯಾನ ಬದಲಾವಣೆಗೆ ಒಪ್ಪಿರುವುದು ಸೂಕ್ತ. ಹೂಡಿಕೆ ಹಾಗೂ ವಹಿವಾಟಿನ ಆಧಾರದ ಮೇಲೆ ಉದ್ಯಮದ ವರ್ಗೀಕರಣ ಆಗಬೇಕೆಂಬ ನಾಲ್ಕೈದು ವರ್ಷಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಯಾವುದೇ ಖಾತೆಯನ್ನು ಅನುಪಯುಕ್ತ ಆಸ್ತಿ ಮೊತ್ತವೆಂದು (ಎನ್‌ಪಿಎ) ತಕ್ಷಣಕ್ಕೆ ಪರಿಗಣಿಸದೆ ಡಿಸೆಂಬರ್ ನಂತರ ಈ ಬಗ್ಗೆ ಪರಿಗಣಿಸುವಂತೆ ಸೂಚಿಸಿರುವುದರಿಂದ ಸಾಲ ಪಡೆದಿರುವ ಉದ್ದಿಮೆದಾರರು ಕೆಲ ತಿಂಗಳ ಮಟ್ಟಿಗೆ ನಿರಾಳರಾಗುವಂತಾಗಿದೆ.
ಹಾಗೆಯೇ 50,000 ಕೋಟಿ ರೂ. ಈಕ್ವಿಟಿ ರೂಪದಲ್ಲಿ ಎಂಎಸ್‌ಎಂಇ ವಲಯಕ್ಕೆ ಬಂದರೆ ಸೂಕ್ಷ್ಮ ಉದ್ಯಮ ಸಣ್ಣ ವಲಯಕ್ಕೆ, ಸಣ್ಣ ಉದ್ಯಮ ಮಧ್ಯಮ ಹಾಗೂ ಭಾರೀ ಉದ್ಯಮವಾಗಿ ರೂಪುಗೊಳ್ಳಲು ಅನುಕೂಲವಾಗಲಿದೆ. ಈ ಮೂರು ಅಂಶಗಳಷ್ಟೇ ಉಪಯುಕ್ತವಾಗಿವೆ. ಐಸಿಯುನಲ್ಲಿದ್ದವರಿಗೆ ಆಕ್ಸಿಜನ್ ಬದಲು ನೀರು ಕೊಟ್ಟಂತೆ! ಈಗಾಗಲೇ ಸಾಲದಲ್ಲಿರುವ ಸಣ್ಣ ಉದ್ದಿಮೆದಾರರು ಹಣ ಹರಿಯುವಿಕೆ ಇಲ್ಲದೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಐಸಿಯು ನಲ್ಲಿರುವವರಿಗೆ ಆಕ್ಸಿಜನ್ ನೀಡಬೇಕು.
ಅದನ್ನು ಬಿಟ್ಟು ನೀರು ಕೊಟ್ಟರೆ ಏನಾಗುತ್ತದೆ. ಹಾಗೆಯೇ ಸದ್ಯ ಸಣ್ಣ ಉದ್ದಿಮೆದಾರರ ಸ್ಥಿತಿ ಇದೆ. ಹಣ ಹರಿಯುವಿಕೆಗೆ ಒತ್ತು ನೀಡದಿರುವುದು ಸಣ್ಣ ಉದ್ಯಮಗಳಿಗೆ ಭಾರಿ ಹೊಡೆತ ಬಿದ್ದಂತಾಗಿದ್ದು, ಚೇತರಿಕೆ ಕಷ್ಟವೆನಿಸಿದೆ. ಈ ಹಿಂದೆ ಬಹಳಷ್ಟು ಸಣ್ಣ ಕೈಗಾರಿಕೆಗಳು ಕೇಂದ್ರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಿಗೆ (ಪಿಎಸ್ ಯು) ಉತ್ಪನ್ನಗಳನ್ನು ಪೂರೈಸಿ 50 ದಿನ ಕಳೆದಿತ್ತು. ಆ ನಂತರ ಲಾಕ್ ಡೌನ್‌ನಿಂದ 45 ದಿನ ಕಳೆದಿದೆ. ಹಾಗಿ ದ್ದರೂ ಸಾರ್ವಜನಿಕ ಉದ್ದಿಮೆಗಳು ಸಣ್ಣ ಕೈಗಾರಿಕೆಗಳಿಗೆ ಬಿಲ್ ಪಾವತಿಗೆ ಮತ್ತೆ 45 ದಿನ ಕಾಲಾವಕಾಶ ನೀಡಿರುವುದು ಸಣ್ಣ ಉದ್ಯಮಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೀಗೆ ಪ್ರಧಾನಿ ಮೋದಿಯವರು ಸ್ವಾವಲಂಬನೆ, ಸ್ಥಳೀಯತೆಗೆ ಉತ್ತೇಜನ ನೀಡುವ ಬಗ್ಗೆ ವ್ಯಕ್ತಪಡಿಸಿದ ಆಶಯಗಳು ಕೇಂದ್ರ ಸಚಿವೆ ನಿರ್ಮಲಾ ಉಪಕ್ರಮಗಳಲ್ಲಿ ಕಾಣುತ್ತಿಲ್ಲ. ಮೇಲ್ನೋಟಕ್ಕೆ ಸಣ್ಣ ಉದ್ದಿಮೆಗಳಿಗೆ ಆಕರ್ಷಕ ಕೊಡುಗೆಯಂತೆ ಕಂಡರೂ ಒಳಹೊಕ್ಕು ನೋಡಿದಾಗ ಹೆಚ್ಚಿನ ಪ್ರಯೋಜನವಿಲ್ಲದಿ ರುವುದು ಸ್ಪಷ್ಟವಾಗುತ್ತದೆ. ಈ ಸಂಬಂಧ ಅಸೋಚಾಮ್ ಹಾಗೂ μಕ್ಕಿ ವತಿಯಿಂದ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೊರತೆಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.
ಪ್ರಯೋಜನಕ್ಕೆ ಬಾರದ ಉಪಕ್ರಮ: ಸಣ್ಣ ಉದ್ಯಮಗಳಿಗೆ 3 ಲಕ್ಷ ಕೋಟಿ ರೂ. ಖಾತರಿರಹಿತ ಸಾಲ ನೀಡುವುದಾಗಿ ಘೋಷಿಸಲಾಗಿದೆ. ಈಗಾಗಲೇ ಸಣ್ಣ ಉದ್ದಿಮೆದಾರರು ತಮ್ಮ ಆಸ್ತಿ ಇತರೆ ಖಾತರಿ ನೀಡಿ ಸಾಲ ಪಡೆದಿದ್ದಾರೆ. ಹಾಗಾಗಿ ಖಾತರಿರಹಿತ ಇಲ್ಲವೇ ಸರ್ಕಾರಿ ಖಾತರಿಯಡಿ ಸಾಲ ಪಡೆಯುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಹಾಗಾಗಿ ಸಣ್ಣ ಉದ್ದಿಮೆದಾರರಿಗೆ ಯಾವುದೇ ರೀತಿಯ ಪ್ರಯೋಜನವಾಗದು.
ಸಣ್ಣ ಉದ್ಯಮಗಳಿಗೆ ತಕ್ಷಣಕ್ಕೆ ಹಣ ಹರಿಯುವಿಕೆಯ ನೆರವಿನ ಅಗತ್ಯವಿತ್ತು. ಈಗಾಗಲೇ ಪಡೆದಿರುವ ದುಡಿಮೆ ಬಂಡವಾಳದ ಮೇಲೆ ಶೇ. 25ರಿಂದ ಶೇ. 30ರಷ್ಟು ಹೆಚ್ಚುವರಿ ಹಣ ಪೂರೈಕೆಗೆ ಮುಂದಾಗಿದ್ದರೆ ಉದ್ದಿಮೆದಾರರಿಗೆ ತಕ್ಷಣ ಹಣ ಸಿಗುತ್ತಿತ್ತು. ಅದರಲ್ಲಿ ಕಾರ್ಖಾನೆ ಬಾಡಿಗೆ, ನೌಕರರ ವೇತನ ಪಾವತಿ ಇಲ್ಲವೇ ಕಚ್ಚಾ ಪದಾರ್ಥ ಖರೀದಿಗೆ ಅನುಕೂಲವಾಗುತ್ತಿತ್ತು. ಈ ಹೆಚ್ಚುವರಿ ಹಣಕ್ಕೆ ಸರ್ಕಾರವೇ ಬಡ್ಡಿ ಪಾವತಿಸಿ ಕಾಲಮಿತಿಯಲ್ಲಿ ಉದ್ದಿಮೆದಾರರಿಂದ ಹಣ ವಾಪಸ್ ಪಡೆಯಬಹುದಿತ್ತು. ಆದರೆ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ.
* ಜೆ. ಕ್ರಾಸ್ಟ, ಅಸೋಚಾಮ್ ಮತ್ತು “ಫಿಕ್ಕಿ’ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು