Advertisement

ಕೌತುಕ-ಕೌಶಲ ಹೆಚ್ಚಿಸಿದ ಭಾವಾಂತರಂಗ

09:34 PM Aug 15, 2019 | mahesh |

ಪಠ್ಯೇತರ ಚಟುವಟಿಕೆಗಳು ಶೈಕ್ಷಣಿಕ ಸಾಧನೆಯ ದಾರಿಯಲ್ಲಿ ಅಡ್ಡಿಯುಂಟು ಮಾಡಬಹುದೆಂಬ ಆತಂಕ ಹೆಚ್ಚಿನ ಪೋಷಕರನ್ನು ಕಾಡುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿರುವ ಈ ಕೊರತೆ ಯನ್ನು ಗಮನಿಸಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರತಿವರ್ಷ ಭಾವಾಂತರಂಗ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ವಿವಿಧ ಕಲೆ-ಕುಶಲತೆಗೆ ಪ್ರೋತ್ಸಾಹ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇತ್ತೀಚೆಗೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸುಮಾರು 34ಸಂಪನ್ಮೂಲ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ವಿವಿಧ ಕರಕುಶಲತೆಯನ್ನು ಪರಿಚಯಿಸುವ ಹಾಗೂ ಅವರಲ್ಲಿ ಕೌತುಕ-ಕೌಶಲ ಹೆಚ್ಚಿಸುವ ಭಾವಾಂತರಂಗ 2019-20 ಕಾರ್ಯಕ್ರಮ ಸಂಪನ್ನವಾಯಿತು.

Advertisement

ರವಿ ಪ್ರಸಾದ್‌ ಆಚಾರ್ಯ ಗೋಳಿ ಅಂಗಡಿ ಅವರ ಬಣ್ಣದ ಕಾಗದವನ್ನು ನಾಜೂಕಾಗಿ ಕತ್ತರಿಸಿ ವಿವಿಧ ಮಹಾಪುರುಷರ, ದೇವಿ-ದೇವತೆಯರ ಚಂದದ ಆಕಾರ ಕೊಡುವ ಕಲೆ ಮಕ್ಕಳ ಮನಸ್ಸಿಗೆ ಮುದ ನೀಡಿತು. ಅಕ್ಷರಗಳಲ್ಲಿ ಅರಳುವ ಚಿತ್ರಕಲೆಯ ಕುರಿತಂತೆ ಚಂದ್ರಶೇರ್ಖ ಡಿ. ಆರ್‌. ಶಿಕಾರಿಪುರ, ಸಹನಾ ಕೆ ಹೆಬ್ಟಾರ್‌ ಪೇತ್ರಿ ಅವರ ಕಾಗದದ ಹೂವಿನ ತಯಾರಿಕೆ, ಸುಪ್ರಿಯಾ ಪೇತ್ರಿ ಅವರ ಪೇಪರ್‌ ವಾಜ್‌ ತಯಾರಿಕೆಯಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಸಹಾಯಕವಾಗುವಂತಿದ್ದವು. ರಾಘವೇಂದ್ರ ಕೊಡ್ಲಾಡಿ ಅವರ ತರಕಾರಿಯಲ್ಲಿ ವಿವಿಧ ಆಕೃತಿಗಳನ್ನು ತಯಾರಿಸುವ ಕಲೆ ಯುವ ಮನಸ್ಸುಗಳನ್ನು ಸೂರೆಗೊಂಡಿತು. ದೊನ್ನೆ ಮೆಣಸಿನಲ್ಲಿ ಆಮೆ, ಕುಂಬಳಕಾಯಿಯಿಂದ ಮೂಡಿ ಬಂದ ಮೀನು, ಕಲ್ಲಂಗಡಿ ಹಣ್ಣಿನಿಂದ ತಯಾರಾದ ಹೂಗುಚ್ಚ ವಿಸ್ಮಯಗೊಳಿಸಿತು.

ಕಸದಿಂದ ರಸ ಎನ್ನುವಂತೆ ಬಳಸಿ ಎಸೆಯುವ ತಂಪು ಪಾನೀಯದ ಪ್ಲಾಸ್ಟಿಕ್‌ ಬಾಟಲಿಯಂತಹ ನಿರುಪಯುಕ್ತ ವಸ್ತುವಿನಿಂದ ಸುಜಾತಾ ವಿ ಶೆಟ್ಟಿ ಪೇತ್ರಿ ಅವರು ತಯಾರಿಸಿದ ವೇಸ್ಟ್‌ಬಾಟಲ್‌ ವಾಜ್‌ , ತೆಂಗಿನ ಸೋಗೆಯಿಂದ ಮಾಡಬಹುದಾದ ಪರಿಸರ ಸ್ನೇಹಿ ವಾಲ್‌ ಹೇಂಗಿಂಗ್‌ನಂತಹ ಅನೇಕ ಚಿತ್ತಾಕರ್ಷಕ ಕಲಾಕೃತಿಗಳು ಭಾಗವಹಿಸಿದ ವಿದ್ಯಾರ್ಥಿಗಳ ಜಿಜ್ಞಾಸೆ ಹೆಚ್ಚಿಸಿದವು. ಗಾಳಿಪಟ ತಯಾರಿಕೆ, ಗೂಡು ದೀಪ ತಯಾರಿಕೆ, ಬಾಗಿಲು ತೋರಣ ತಯಾರಿಕೆ,ರಾಖೀ ತಯಾರಿಕೆ, ಮದರಂಗಿ ಕಲೆ, ರಂಗೋಲಿಯಂತಹ ಪಾರಂಪರಿಕ ಕುಶಲ ಕಲೆಗಳನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯಾಗಾರಗಳು ಅಲ್ಲಿತ್ತು.

ಇಂದಿನ ಸರಕಾರಿ ಹಾಗೂ ಕಾರ್ಪೋರೇಟ್‌ ಜಗತ್ತಿನ ಉದ್ಯೋಗ ಮಾರುಕಟ್ಟೆಯ ಸ್ಪರ್ಧಾತ್ಮಕತೆಗೆ ಸಜ್ಜುಗೊಳಿಸುವ, ವಿದ್ಯಾರ್ಥಿಗಳ ಪ್ರತಿಭೆಗೆ ಸಾಣೆ ಹಾಕಬಲ್ಲ, ವ್ಯಕ್ತಿತ್ವಕ್ಕೆ ಮೆರುಗು ನೀಡಬಲ್ಲ ಕೌಶ್ಯಲ್ಯಗಳೆನಿಸಿದ ಪತ್ರಿಕಾ ಲೇಖನ ಬರವಣಿಗೆ,ರಂಗ ಕಲೆ, ಏಕಪಾತ್ರಾಭಿನಯ, ವ್ಯಕ್ತಿತ್ವ ವಿಕಸನ, ಕವನ ಮತ್ತು ಕಲೆ, ಭಾಷಣ ಕಲೆಯಂತಹ ಕಾರ್ಯಾಗಾರಗಳು ಸಂಪನ್ಮೂಲ ವ್ಯಕ್ತಿಗಳಿಂದ ಕಳೆಗಟ್ಟಿದವು. ಪರಿಸರದ ಅರಿವು, ಬಟ್ಟೆ ಅಥವಾ ಕಾಗದದ ಚೀಲ ತಯಾರಿಕೆ,ಪೆನ್‌ಸ್ಟಾಂಡ್‌ ಮತ್ತು ಗೊಂಬೆ ತಯಾರಿಕೆ,ಆಹಾರ ಮತ್ತು ಔಷಧಿಯಂತಹ ಕಾರ್ಯಾಗಾರಗಳು ಎಳೆಯ ಮನಸ್ಸುಗಳಲ್ಲಿ ಪ್ರಕೃತಿ ಪ್ರೇಮ ಹೆಚ್ಚಿಸುವಲ್ಲಿ ಸಫ‌ಲವಾಯಿತು.

ಬೈಂದೂರು ಚಂದ್ರಶೇಖರ ನಾವಡ

Advertisement
Advertisement

Udayavani is now on Telegram. Click here to join our channel and stay updated with the latest news.