Advertisement

ವನಿತಾ ವಿಶ್ವಕಪ್‌ ಅಭ್ಯಾಸ ಪಂದ್ಯ: ವಿಂಡೀಸ್‌ಗೆ ಸೋಲುಣಿಸಿದ ಭಾರತ

05:32 PM Mar 01, 2022 | Team Udayavani |

ರಂಗಿಯೋರ (ನ್ಯೂಜಿಲ್ಯಾಂಡ್‌): ತನ್ನ ದ್ವಿತೀಯ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಭಾರತ 81 ರನ್ನುಗಳ ಭಾರೀ ಅಂತರದಿಂದ ವೆಸ್ಟ್‌ ಇಂಡೀಸ್‌ಗೆ ಸೋಲುಣಿಸಿದೆ. ಇದರೊಂದಿಗೆ ಎರಡೂ ವಾರ್ಮ್ಅಪ್‌ ಮ್ಯಾಚ್‌ ಗೆದ್ದ ಸಾಧನೆಗೈದಿದೆ.

Advertisement

ಮೊದಲ ಮುಖಾಮುಖಿಯಲ್ಲಿ ಮಿಥಾಲಿ ಪಡೆ ದಕ್ಷಿಣ ಆಫ್ರಿಕಾವನ್ನು 2 ರನ್ನುಗಳಿಂದ ರೋಚಕವಾಗಿ ಮಣಿಸಿತ್ತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಸರಿಯಾಗಿ 50 ಓವರ್‌ಗಳಲ್ಲಿ 258ಕ್ಕೆ ಆಲೌಟ್‌ ಆಯಿತು. ವೆಸ್ಟ್‌ ಇಂಡೀಸ್‌ 9ಕ್ಕೆ 177 ರನ್‌ ಮಾಡಿ ಶರಣಾಯಿತು.

ಮಂಧನಾ-ದೀಪ್ತಿ ಫಿಫ್ಟಿ
ಸ್ಮೃತಿ ಮಂಧನಾ ಮತ್ತು ದೀಪ್ತಿ ಶರ್ಮ ಅವರ ಅರ್ಧ ಶತಕ, ಯಾಸ್ತಿಕಾ ಭಾಟಿಯಾ ಅವರ 42 ರನ್‌ ಕೊಡುಗೆ ಭಾರತದ ಸರದಿಯ ಆಕರ್ಷಣೆ ಆಗಿತ್ತು. ಮೊದಲ ಅಭ್ಯಾಸ ಪಂದ್ಯ ವೇಳೆ ತಲೆಗೆ ಚೆಂಡಿನೇಟು ತಿಂದಿದ್ದ ಮಂಧನಾ, ಇಲ್ಲಿ ಯಾವುದೇ ಸಮಸ್ಯೆಗೆ ಸಿಲುಕದೆ 66 ರನ್‌ ಬಾರಿಸಿದರು (67 ಎಸೆತ, 7 ಬೌಂಡರಿ). ಎಚ್ಚರಿಕೆಯ ಆಟವಾಡಿದ ದೀಪ್ತಿ ಶರ್ಮ 64 ಎಸೆತ ಎದುರಿಸಿ 51 ರನ್‌ ಹೊಡೆದರು. ಇದರಲ್ಲಿ ಕೇವಲ ಒಂದು ಬೌಂಡರಿ ಸೇರಿತ್ತು. ನಾಯಕಿ ಮಿಥಾಲಿ ರಾಜ್‌ 30 ರನ್‌ ಕೊಡುಗೆ ಸಲ್ಲಿಸಿದರು.

ಶಫಾಲಿ ವರ್ಮ ಮೊದಲ ಓವರ್‌ನಲ್ಲೇ ಖಾತೆ ತೆರೆಯದೆ ವಾಪಸಾದ ಬಳಿಕ ಜತೆಗೂಡಿದ ಮಂಧನಾ-ದೀಪ್ತಿ 117 ರನ್‌ ಜತೆಯಾಟ ನಿಭಾಯಿಸಿದರು.

Advertisement

ಇದನ್ನೂ ಓದಿ:ನೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಲಿ: ಗಾವಸ್ಕರ್ ಹಾರೈಕೆ

ಭಾರತದ ಬಿಗಿ ದಾಳಿ
ಚೇಸಿಂಗ್‌ ವೇಳೆ ಭಾರತದ ಬೌಲಿಂಗ್‌ ದಾಳಿಗೆ ಪರದಾಡಿದ ವಿಂಡೀಸಿಗೆ ಯಾವ ಹಂತದಲ್ಲೂ ಮೇಲುಗೈ ಸಾಧ್ಯವಾಗಲಿಲ್ಲ. ಭಾರತದ ಬೌಲರ್ ಒಟ್ಟು 6 ಮೇಡನ್‌ ಓವರ್‌ ಎಸೆದರು. ಸ್ಟ್ರೈಕ್‌ ಬೌಲರ್‌ಗಳಾದ ಮೇಘನಾ ಸಿಂಗ್‌ 3, ಜೂಲನ್‌ 2 ಮೇಡನ್‌ ಎಸೆದು ಕೆರಿಬಿಯನ್ನರಿಗೆ ಆರಂಭದಲ್ಲೇ ಕಡಿವಾಣ ಹಾಕಿದರು.

ಜೂಲನ್‌ ವಿಕೆಟ್‌ ಗಳಿಸದೇ ಹೋದರೂ 8 ಓವರ್‌ಗಳಿಂದ ಕೇವಲ 14 ರನ್‌ ನೀಡಿ ಗಮನ ಸೆಳೆದರು. ಪೂಜಾ ವಸ್ತ್ರಾಕರ್‌ 3, ಮೇಘನಾ, ರಾಜೇಶ್ವರಿ ಗಾಯಕ್ವಾಡ್‌ ಮತ್ತು ದೀಪ್ತಿ ಶರ್ಮ ತಲಾ 2 ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-50 ಓವರ್‌ಗಳಲ್ಲಿ 258 (ಮಂಧನಾ 66, ದೀಪ್ತಿ 51, ಯಾಸ್ತಿಕಾ 42, ಮಿಥಾಲಿ 30, ಫ್ರೇಸರ್‌ 24ಕ್ಕೆ 2, ಹ್ಯಾಲಿ 47ಕ್ಕೆ 2). ವೆಸ್ಟ್‌ ಇಂಡೀಸ್‌-50 ಓವರ್‌ಗಳಲ್ಲಿ 9 ವಿಕೆಟಿಗೆ 177 (ಕ್ಯಾಂಬೆಲ್‌ 63, ಹ್ಯಾಲಿ 44, ಪೂಜಾ 21ಕ್ಕೆ 3, ಮೇಘನಾ 30ಕ್ಕೆ 2, ದೀಪ್ತಿ 31ಕ್ಕೆ 2, ರಾಜೇಶ್ವರಿ 39ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next