ಆಮ್‌ಸ್ಟೆಲ್ವಿನ್: ಸತತ 2 ಡ್ರಾ ಫಲಿತಾಂಶಗಳ ಬಳಿಕ ಭಾರತ ತಂಡ ವನಿತಾ ವಿಶ್ವಕಪ್ ಹಾಕಿ ಪಂದ್ಯಾವಳಿಯ ಅಂತಿಮ ಲೀಗ್ ಸ್ಪರ್ಧೆಯಲ್ಲಿ ನ್ಯೂಜಿಲ್ಯಾಂಡ್‌ಗೆ 3-4 ಗೋಲುಗಳಿಂದ ಶರಣಾಯಿತು.
ಇದರೊಂದಿಗೆ “ಬಿ’ ವಿಭಾಗದ ತೃತೀಯ ಸ್ಥಾನ ಪಡೆದು “ಕ್ರಾಸ್ ಓವರ್’ನಲ್ಲಿ ಆಡುವ ಅವಕಾಶ ಪಡೆಯಿತು.
ಇಲ್ಲಿ ಭಾರತದ ಎದುರಾಳಿ ಆತಿಥೇಯ ರಾಷ್ಟ್ರಗಳಲ್ಲೊಂದಾದ ಸ್ಪೇನ್. ಅದು “ಸಿ’ ವಿಭಾಗದ ದ್ವಿತೀಯ ಸ್ಥಾನಿಯಾಗಿದೆ. ಈ ಪಂದ್ಯ ರವಿವಾರ ನಡೆಯಲಿದ್ದು, ಇಲ್ಲಿ ಗೆದ್ದರೆ ಕ್ವಾರ್ಟರ್ ಫೈನಲ್ ತಲುಪಬಹುದಾಗಿದೆ.
4 ವಿಭಾಗಗಳಲ್ಲಿ ಮೊದಲ ಸ್ಥಾನ ಅಲಂಕರಿಸಿದ ನೆದರ್ಲೆಂಡ್ಸ್, ನ್ಯೂಜಿಲ್ಯಾಂಡ್, ಆರ್ಜೆಂಟೀನಾ ಮತ್ತು ಆಸ್ಟ್ರೇಲಿಯ ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿವೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ವಂದನಾ ಕಟಾರಿಯಾ (4ನೇ ನಿಮಿಷ), ಲಾಲ್ರೆಮ್ಸಿಯಾಮಿ (44ನೇ ನಿಮಿಷ) ಮತ್ತು ಗುರ್ಜೀತ್ ಕೌರ್ (59ನೇ ನಿಮಿಷ) ಭಾರತದ ಪರ ಗೋಲು ದಾಖಲಿಸಿದರು.