Advertisement

ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌: ನೆದರ್ಲೆಂಡ್ಸ್‌-ಸ್ಪೇನ್‌ ಕ್ವಾರ್ಟರ್‌ ಫೈನಲ್‌

10:56 PM Aug 06, 2023 | Team Udayavani |

ಸಿಡ್ನಿ: ದಕ್ಷಿಣ ಆಫ್ರಿಕಾವನ್ನು 2-0 ಅಂತರದಿಂದ ಮಣಿಸಿದ ನೆದರ್ಲೆಂಡ್ಸ್‌ ತಂಡ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ಕ್ವಾರ್ಟ್‌ರ್‌ ಫೈನಲ್‌ ತಲುಪಿದೆ. ಇಲ್ಲಿ ಸ್ಪೇನ್‌ ವಿರುದ್ಧ ಸೆಣಸಲಿದೆ.

Advertisement

2019ರ ರನ್ನರ್ ಅಪ್‌ ತಂಡವಾದ ನೆದರ್ಲೆಂಡ್ಸ್‌ ಪಾಲಿಗೆ ಇದು ನಿರೀಕ್ಷಿತ ಗೆಲುವೇ ಆಗಿತ್ತು. 40 ಸಾವಿರ ವೀಕ್ಷಕರ ಸಮ್ಮುಖದಲ್ಲಿ ಸಾಗಿದ ಈ ಮುಖಾಮುಖೀಯಲ್ಲಿ ಡಚ್‌ ಪಡೆ ತನಗಿಂತ 45ರಷ್ಟು ಕೆಳ ರ್‍ಯಾಂಕಿಂಗ್‌ ತಂಡಕ್ಕೆ ತಿರುಗಿ ಬೀಳಲು ಎಲ್ಲೂ ಆಸ್ಪದ ಕೊಡಲಿಲ್ಲ.

ಜಿಲ್‌ ರೂರ್ಡ್‌ 9ನೇ ನಿಮಿಷದಲ್ಲೇ ಹೆಡರ್‌ ಮೂಲಕ ಗೋಲು ಖಾತೆ ತೆರೆದರು. ಇದು ಈ ಕೂಟದಲ್ಲಿ ರೂರ್ಡ್‌ ಬಾರಿಸಿದ 4ನೇ ಗೋಲು. 68ನೇ ನಿಮಿಷದಲ್ಲಿ ಲಿನೆತ್‌ ಬೀರೆನ್‌ ಸ್ಟೇನ್‌ ದ್ವಿತೀಯ ಗೋಲು ಬಾರಿಸಿ ಮುನ್ನಡೆಯನ್ನು ವಿಸ್ತರಿಸಿದರು.

ನೆದರ್ಲೆಂಡ್ಸ್‌-ಸ್ಪೇನ್‌ ನಡುವಿನ ಕ್ವಾರ್ಟರ್‌ ಫೈನಲ್‌ ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಅಮೆರಿಕಕ್ಕೆ ಆಘಾತವಿಕ್ಕಿದ ಸ್ವೀಡನ್‌
ಮೆಲ್ಬರ್ನ್ನಲ್ಲಿ ನಡೆದ ಇನ್ನೊಂದು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ವೀಡನ್‌ ಪೆನಾಲ್ಟಿ ಕಿಕ್‌ ಮೂಲಕ ಹಾಲಿ ಚಾಂಪಿಯನ್‌ ಅಮೆರಿಕವನ್ನು ಹೊರದಬ್ಬಿತು. ಪೂರ್ಣಾವಧಿ ಹಾಗೂ ಹೆಚ್ಚುವರಿ ಅವಧಿಯ ಆಟ ಯಾವುದೇ ಗೋಲಿಲ್ಲದೆ ಮುಗಿದಿತ್ತು. ಪೆನಾಲ್ಟಿಯಲ್ಲಿ ಸ್ವೀಡನ್‌ 5-4ರಿಂದ ಅಮೆರಿಕವನ್ನು ಉರುಳಿಸಿತು.
ವನಿತಾ ವಿಶ್ವಕಪ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲೊಂದಾದ ಅಮೆರಿಕ 4 ಸಲ ಚಾಂಪಿಯನ್‌ ಆಗಿ ಮೂಡಿಬಂದಿದೆ. ಸತತ 3ನೇ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್‌ ಸಾಧಿಸುವ ಯೋಜನೆಯಲ್ಲಿತ್ತು. ಆದರೆ ಮೊದಲ ಬಾರಿಗೆ 16ರ ಸುತ್ತಿನಲ್ಲಿ ಸೋತು ಹೊರಬೀಳುವ ಸಂಕಟಕ್ಕೆ ಸಿಲುಕಿತು. 3 ಸಲ 3ನೇ ಸ್ಥಾನಿಯಾದದ್ದೇ ಅಮೆರಿಕದ ಈವರೆಗಿನ ಅತ್ಯಂತ ಕೆಳಮಟ್ಟದ ಪ್ರದರ್ಶನವಾಗಿತ್ತು.

Advertisement

ವಿಶ್ವಕಪ್‌ ಇತಿಹಾಸದಲ್ಲಿ ಅಮೆರಿಕದ ಪಂದ್ಯವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸಲ್ಪಟ್ಟ ಕೇವಲ 4ನೇ ನಿದರ್ಶನ ಇದಾಗಿದೆ. ಇದರಲ್ಲಿ ಅಮೆರಿಕ 2 ಸಲ ಜಯಿಸಿತ್ತು. ಹಿಂದಿನ ಸೋಲು ಎದುರಾದದ್ದು 2011ರ ಫೈನಲ್‌ನಲ್ಲಿ. ಅಂದು ಜಪಾನ್‌ ಜಬರ್ದಸ್ತ್ ಪ್ರದರ್ಶನದ ಮೂಲಕ ಅಮೆರಿಕಕ್ಕೆ ಶಾಕ್‌ ಕೊಟ್ಟಿತ್ತು. ಚೀನ ಎದುರಿನ 1999ರ ಫೈನಲ್‌ ಹಾಗೂ ಬ್ರಝಿಲ್‌ ಎದುರಿನ 2011ರ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕ ಜಯ ಸಾಧಿಸಿತ್ತು.

ಸ್ವೀಡನ್‌ ಇದಕ್ಕೂ ಮುನ್ನ 2016ರ ಒಲಿಂಪಿಕ್ಸ್‌ನಲ್ಲೂ ಅಮೆರಿಕಕ್ಕೆ ಪೆನಾಲ್ಟಿ ಆಘಾತವಿಕ್ಕಿತ್ತು. ಅಂದಿನದು ಕ್ವಾರ್ಟರ್‌ ಫೈನಲ್‌ ಪಂದ್ಯವಾಗಿತ್ತು.

ಸ್ವೀಡನ್‌ ವನಿತಾ ತಂಡ ಈವರೆಗೆ ಯಾವುದೇ ವಿಶ್ವ ದರ್ಜೆಯ ಕೂಟಗಳಲ್ಲಿ ಚಾಂಪಿಯನ್‌ ಆಗಿಲ್ಲ. 2003ರ ವಿಶ್ವಕಪ್‌ನಲ್ಲಿ ರನ್ನರ್ ಅಪ್‌ ಎನಿಸಿದ್ದೇ ಅತ್ಯುತ್ತಮ ಸಾಧನೆ. 1999, 2011 ಮತ್ತು 2019ರಲ್ಲಿ ತೃತೀಯ ಸ್ಥಾನ ಪಡೆದಿತ್ತು. ಕಳೆದೆರಡು ಒಲಿಂಪಿಕ್ಸ್‌ಗಳಲ್ಲಿ ಬೆಳ್ಳಿ ಪದಕ ಜಯಿಸಿತ್ತು.

ಸ್ವೀಡನ್‌ ವರ್ಸಸ್‌ ಜಪಾನ್‌
ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವೀಡನ್‌ ಎದುರಾಳಿಯಾಗಿ ಕಣಕ್ಕಿಳಿಯುವ ತಂಡ ಜಪಾನ್‌. 2011ರ ಚಾಂಪಿಯನ್‌ ಆಗಿರುವ ಜಪಾನ್‌, 3-1 ಅಂತರದಿಂದ ನಾರ್ವೆಯನ್ನು ಪರಾಭವಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next