Advertisement
ಬುಧವಾರ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 153 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ 17.3 ಓವರ್‌ಗಳಲ್ಲಿ 120 ರನ್ನಿಗೆ ಸರ್ವಪತನ ಕಂಡಿತು. ಇದಕ್ಕೂ ಮುನ್ನ ಆಸೀಸ್ ವನಿತೆಯರು ಪಾಕಿಸ್ಥಾನ ಮತ್ತು ಐರ್ಲೆಂಡ್ ತಂಡಗಳಿಗೆ ಸೋಲುಣಿಸಿದ್ದರು.
ಆಸ್ಟ್ರೇಲಿಯದ ಸವಾಲಿನ ಮೊತ್ತದಲ್ಲಿ ಆರಂಭಿಕ ಆಟಗಾರ್ತಿ ಅಲಿಸ್ಸಾ ಹೀಲಿ ಅವರ 53 ರನ್ನುಗಳ ಕೊಡುಗೆ ಮಹತ್ವದ್ದಾಗಿತ್ತು. ಬೆತ್ ಮೂನಿ (26) ಜತೆ ಅವರು ಮೊದಲ ವಿಕೆಟಿಗೆ 8.3 ಓವರ್‌ಗಳಿಂದ 71 ರನ್ ಪೇರಿಸಿ ಭದ್ರ ಅಡಿಪಾಯ ನಿರ್ಮಿಸಿದರು. 13ನೇ ಓವರ್ ತನಕ ಕ್ರೀಸಿನಲ್ಲಿ ನಿಂತ ಹೀಲಿ ಕೇವಲ 38 ಎಸೆತ ಹಾಗೂ 8 ಬೌಂಡರಿ ನೆರವಿನಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ಈ ಸಾಹಸಕ್ಕಾಗಿ ಹೀಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಆರಂಭಿಕರನ್ನು ಹೊರತುಪಡಿಸಿದರೆ ರಶೆಲ್ ಹೇನ್ಸ್ ಅಜೇಯ 29 ರನ್ ಮಾಡಿ ಗಮನ ಸೆಳೆದರು. ಪ್ರಬಲ ತಂಡ ನ್ಯೂಜಿಲ್ಯಾಂಡ್ ಮಧ್ಯಮ ವೇಗಿ ಮೆಗಾನ್ ಶಟ್ ದಾಳಿಗೆ (12ಕ್ಕೆ 3) ನೆಲಕಚ್ಚಿತು. ಮತ್ತೋರ್ವ ಮೀಡಿಯಂ ಪೇಸ್ ಬೌಲರ್ ಡೆಲಿಸ್ಸಾ ಕಿಮ್ಮಿನ್ಸ್ ಮತ್ತು ಎಡಗೈ ಸ್ಪಿನ್ನರ್ ಸೋಫಿ ಮೊಲಿನಾಕ್ಸ್ ತಲಾ 2 ವಿಕೆಟ್ ಉರುಳಿಸಿದರು. ಕಾಂಗರೂ ಆಕ್ರಮಣವನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಿದವರೆಂದರೆ ಓಪನರ್ ಸುಝಿ ಬೇಟ್ಸ್ (48) ಮತ್ತು ಕೀಪರ್ ಕ್ಯಾಟಿ ಮಾರ್ಟಿನ್ (24) ಮಾತ್ರ. ಎರಡೂ ಪಂದ್ಯಗಳನ್ನು ಸೋತಿರುವ ನ್ಯೂಜಿಲ್ಯಾಂಡ್ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
Related Articles
Advertisement