Advertisement

ಇನ್ನು ನಡೆಯಲಿದೆ ಮಹಿಳಾ ವಾರ್ಡ್‌ ಸಭೆ! ಇನ್ನಷ್ಟು ಸ್ತ್ರೀಸ್ನೇಹಿಯಾಗುವತ್ತ ಗ್ರಾ.ಪಂ.

01:33 AM Apr 17, 2021 | Team Udayavani |

ಮಂಗಳೂರು: ಗ್ರಾಮ ಸಭೆಯ ಪೂರ್ವದಲ್ಲಿ ನಡೆಯುವ ವಾರ್ಡ್‌ಸಭೆ ಮಾದರಿಯಲ್ಲೇ ಇನ್ನು ಮಹಿಳಾ ವಾರ್ಡ್‌ ಸಭೆಯೂ ನಡೆಯಲಿದೆ.

Advertisement

ಸ್ತ್ರೀ ಸಶಕ್ತೀಕರಣ ಮತ್ತು ಸ್ಥಳೀಯ ಆಡಳಿತದಲ್ಲಿ ಅವರು ಸಕ್ರಿಯರಾಗುವಂತೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಿಳಾ ಗ್ರಾಮಸಭೆಗೆ ಹುರುಪು ತುಂಬುವ ಉದ್ದೇಶವೂ ಇದೆ.

ಅಂಗನವಾಡಿ ಕಾರ್ಯಕರ್ತೆಯರು ಈ ಸಭೆ ನಿರ್ವಹಿಸಲಿದ್ದಾರೆ. ಆಯಾ ವಾರ್ಡ್‌ಗೆ ಸಂಬಂಧ ಪಡುವ ಗ್ರಾ.ಪಂ.ಚುನಾಯಿತ ಸದಸ್ಯರ ಉಸ್ತುವಾರಿ ಇರಲಿದೆ.

ಸಭೆಯನ್ನು ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳ, ದುಡಿಯುವ ಮಹಿಳೆಯರಿಗೆ ಅನುಕೂಲಕರ ದಿನ, ಸಮಯದಲ್ಲಿ ನಡೆಸಬಹುದು. ಅನುಸೂಚಿತ ಜಾತಿ/ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾಕರು, ಅಂಗವಿಕಲ ಸ್ತ್ರೀಯರಿಗೆ ಭಾಗವಹಿಸಲು ಮತ್ತು ಚರ್ಚಿಸಲು ಸಮಾನ ಅವಕಾಶ ನೀಡಲಾಗುತ್ತದೆ.

ಸಭೆಯಲ್ಲಿ ಏನಿರುತ್ತದೆ?
– ಸ್ತ್ರೀಯರ ಹಕ್ಕುಗಳು, ಸರಕಾರದ ವಿವಿಧ ಯೋಜನೆ, ಸೌಲಭ್ಯಗಳ ಮಾಹಿತಿ.
– ಅವರ ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ಇದೆ.
– ಮಕ್ಕಳ ಶಿಕ್ಷಣ, ಶಾಲೆ, ಆರೋಗ್ಯ ಸೇವೆ, ರಕ್ಷಣೆ, ಆಹಾರ – ಪೌಷ್ಟಿಕತೆ, ನೀರು, ನೈರ್ಮಲ್ಯ, ಶುಚಿತ್ವ, ರಸ್ತೆ, ಅಂಗನವಾಡಿ, ವಸತಿ ಸೌಲಭ್ಯ, ಮಾನವ ಸಂಪದ ಇತ್ಯಾದಿ ಬೇಡಿಕೆ, ಸಮಸ್ಯೆ ಗಳ ಚರ್ಚೆಗೆ ಅವಕಾಶ.
– ಲಾಕ್‌ಡೌನ್‌ ಸಮಯದಲ್ಲಿ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ಅಪೌಷ್ಟಿಕತೆ, ಬಾಲ್ಯ ವಿವಾಹ ಚರ್ಚೆ.
– ಮಹಿಳಾ ಗ್ರಾಮ ಸಭೆಯಲ್ಲಿ ಆಯಾ ವಾರ್ಡ್‌ ಪ್ರತಿನಿಧಿಸುವವರು ಯಾರೆಂಬುದು ವಾರ್ಡ್‌ ಸಭೆಯಲ್ಲಿ ನಿರ್ಧಾರ.
– ವಾರ್ಡ್‌ ಸಭೆಯ ಅಂಶಗಳು ಮಹಿಳಾ ಗ್ರಾಮಸಭೆಯಲ್ಲಿ ಮಂಡನೆ.

Advertisement

ಸಲಹಾ ಪೆಟ್ಟಿಗೆ
ಅಂಗನವಾಡಿ ಮತ್ತಿತರ ಸುರಕ್ಷಿತ ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತದೆ. ಇಲ್ಲಿ ಬಂದ ಸಲಹೆಗಳನ್ನು ಕ್ರೋಡೀಕರಿಸಿ ಮಹಿಳಾ ಗ್ರಾಮಸಭೆಯಲ್ಲಿ ಮಂಡಿಸಲಾಗುತ್ತದೆ.

ಗ್ರಾ.ಪಂ. ಡೆಸ್ಕ್
ಮಹಿಳಾ ವಾರ್ಡ್‌ ಸಭೆ-ಗ್ರಾಮ ಸಭೆ ವೇಳೆ ವಿವಿಧ ಯೋಜನೆಗಳ ಮಾಹಿತಿ ಪಡೆಯಲು “ಗ್ರಾ.ಪಂ. ಡೆಸ್ಕ್’ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರ ಜವಾಬ್ದಾರಿ ಆಶಾ ಕಾರ್ಯಕರ್ತೆಯರದು.

ಗ್ರಾ.ಪಂ.ಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮಹಿಳಾ ವಾರ್ಡ್‌ ಸಭೆ ನಡೆಯಲಿದೆ. ಸಿದ್ಧಗೊಳ್ಳುವಂತೆ ಗ್ರಾ.ಪಂ.ಗಳಿಗೆ ತಿಳಿಸಿದೆ.
– ಡಾ| ಕುಮಾರ್‌, ಡಾ| ನವೀನ್‌ ಭಟ್‌, ದ.ಕ. ಮತ್ತು ಉಡುಪಿ ಜಿ.ಪಂ. ಸಿಇಒಗಳು

Advertisement

Udayavani is now on Telegram. Click here to join our channel and stay updated with the latest news.

Next