ದುಬೈ: ಭಾರತದ ಪುರುಷರ ತಂಡ ಟಿ20 ವಿಶ್ವಕಪ್ ಗೆದ್ದ ಸಂಭ್ರಮ ಹಸಿರಾಗಿರುವಾಗಲೇ ಮಹಿಳೆಯರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭಗೊಂಡಿದೆ.
ಗುರುವಾರದಿಂದ ದುಬೈ ಮತ್ತು ಶಾರ್ಜಾದಲ್ಲಿ 10 ತಂಡಗಳ ನಡುವಿನ 9ನೇ ಟಿ20 ವಿಶ್ವಕಪ್ ಅಬ್ಬರ ಮೊದಲ್ಗೊಳ್ಳಲಿದ್ದು, ಅ.20ರ ತನಕ ಸಾಗಲಿದೆ. ಸಹಜವಾಗಿಯೇ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಮೇಲೆ ನಿರೀಕ್ಷೆಗಳು ದಟ್ಟೈಸಿವೆ. ನಮ್ಮ ಮಹಿಳೆಯರು ಮೊದಲ ಸಲ ಕಪ್‌ಗೆ ಮುತ್ತಿಕ್ಕಲಿ ಎಂಬುದು ಎಲ್ಲರ ಬಯಕೆ ಹಾಗೂ ಹಾರೈಕೆ.
ಗುರುವಾರದ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ-ಸ್ಲಾಟ್ಲೆಂಡ್ ಮುಖಾಮುಖೀ ಆಗಲಿವೆ. ದಿನದ ಇನ್ನೊಂದು ಪಂದ್ಯ ಪಾಕಿಸ್ತಾನ-ಶ್ರೀಲಂಕಾ ನಡುವೆ ನಡೆಯಲಿದೆ. ಎರಡೂ ಪಂದ್ಯಗಳ ತಾಣ ಶಾರ್ಜಾ. ಭಾರತ ತನ್ನ ಮೊದಲ ಪಂದ್ಯವನ್ನು ಶುಕ್ರವಾರ ರಾತ್ರಿ ನ್ಯೂಜಿಲೆಂಡ್ ವಿರುದ್ಧ ದುಬೈನಲ್ಲಿ ಆಡಲಿದೆ.
ಆಸ್ಟ್ರೇಲಿಯಾ ಮೆಚ್ಚಿನ ತಂಡ, ಭಾರತ ಬಲಿಷ್ಠ: 6 ಬಾರಿ ಮಹಿಳಾ ಟಿ20 ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡ. ಒಮ್ಮೆ ಮಾತ್ರ ಫೈನಲ್‌ಗೆ ಪ್ರವೇಶಿಸಿ, ಒಮ್ಮೆಯೂ ಕಪ್ ಗೆಲ್ಲದ ಭಾರತ ಈ ಬಾರಿ ಮೆಚ್ಚಿನ ತಂಡಗಳಲ್ಲೊಂದು. ಕಾರಣ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗ್ಸ್ ಇರುವ ತಂಡದ ಬಲಿಷ್ಠ ಬ್ಯಾಟಿಂಗ್. ಹಾಗೆಯೇ ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ ಅವರಿರುವ ಅತ್ಯುತ್ತಮ ಬೌಲಿಂಗ್ ವಿಭಾಗ. ಭಾರತಕ್ಕೆ ಪ್ರಬಲ ಎದುರಾಳಿಯಾಗಿರುವುದು ಕಳೆದ 3 ಆವೃತ್ತಿಗಳಲ್ಲೂ ಸತತವಾಗಿ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡ. ಇದಕ್ಕೂ ಮುನ್ನ 2010-2014ರ ಅವಧಿಯಲ್ಲೂ ಅದು ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿತ್ತು.
20 ಕೋಟಿ ರೂ. ನಗದು: ಪುರುಷರಿಗೆ ಸರಿಸಮ ನಗದು!
ಈ ಬಾರಿ ಪುರುಷರ ವಿಶ್ವಕಪ್ ತಂಡದಷ್ಟೇ ಬಹುಮಾನ ಮೊತ್ತವನ್ನು ವನಿತಾ ವಿಶ್ವಕಪ್ ವಿಜೇತರಿಗೂ ನೀಡುವುದು ಐಸಿಸಿಯ ಸಮಾನತೆಯ ದ್ಯೋತಕವಾಗಿದೆ. ಅದರಂತೆ ಈ ಬಾರಿಯ ವಿಜೇತ ತಂಡ 2.34 ಮಿಲಿಯನ್ ಡಾಲರ್, ಅಂದರೆ 19.6 ಕೋಟಿ ರೂ. ಮೊತ್ತ ಪಡೆಯಲಿದೆ. ರನ್ನರ್ ಅಪ್ ತಂಡ 1.17 ಮಿ.ಡಾಲರ್ ಅಂದರೆ 9.8 ಕೋಟಿ ರೂ. ಪಡೆಯಲಿದೆ.