Advertisement

ವನಿತಾ ಟಿ20 ವಿಶ್ವಕಪ್‌: ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ಫೈನಲ್‌ ಕೌತುಕ

10:55 PM Feb 25, 2023 | Team Udayavani |

ಕೇಪ್‌ ಟೌನ್‌: ಒಂದೆಡೆ 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ, ಇನ್ನೊಂದೆಡೆ ಮೊದಲ ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ತವರಿನ ತಂಡ ದಕ್ಷಿಣ ಆಫ್ರಿಕಾ… ಇತ್ತಂಡಗಳು ರವಿವಾರದ 8ನೇ ವನಿತಾ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸೆಣಸಲಿವೆ.

Advertisement

ವಿಶ್ವಕಪ್‌ನಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಿರುವ ಕಾಂಗರೂ ಪಡೆಗೆ ಹರಿಣಗಳ ಬಳಗ ಸಡ್ಡು ಹೊಡೆದೀತೇ, ಮೊದಲ ಅವಕಾಶದಲ್ಲೇ ಪಟ್ಟವೇರಬಹುದೇ, ಕಳೆದೆರಡು ಸಲದ ಚಾಂಪಿಯನ್‌ ಕೂಡ ಆಗಿರುವ ಆಸೀಸ್‌ ಮತ್ತೊಮ್ಮೆ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಬಹುದೇ ಎಂಬೆಲ್ಲ ಕುತೂಹಲ ಕ್ರಿಕೆಟ್‌ ಪ್ರೇಮಿಗಳದ್ದು. ಇದನ್ನು ತಣಿಸಲು ಸಜ್ಜಾಗಿದೆ ಕೇಪ್‌ ಟೌನ್‌ನ “ನ್ಯೂಲ್ಯಾಂಡ್ಸ್‌’ ಮೈದಾನ.

ಆಸ್ಟ್ರೇಲಿಯ ವನಿತೆಯರ ಸಾಮರ್ಥ್ಯ, ಅವರ ತಾಕತ್ತು, ಅವರು ವಿಶ್ವಕಪ್‌ನಲ್ಲಿ ಮೂಡಿಸಿರುವ ಛಾಪು… ಇವುಗಳ ಬಗ್ಗೆ ಎರಡು ಮಾತಿಲ್ಲ. 2009ರ ಚೊಚ್ಚಲ ವಿಶ್ವಕಪ್‌ ಹೊರತು ಪಡಿಸಿದರೆ ಕಾಂಗರೂ ಪಡೆ ವಿಶ್ವಕಪ್‌ ಫೈನಲ್‌ ಮಿಸ್‌ ಮಾಡಿ ಕೊಂಡದ್ದಿಲ್ಲ. 6 ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿ 5 ಸಲ ಕಿರೀಟ ಏರಿಸಿ ಕೊಂಡಿದೆ. ಈ ಸಲವೂ ನೆಚ್ಚಿನ ತಂಡವಾಗಿಯೇ ಉಳಿದುಕೊಂಡಿದೆ. “ಆಸ್ಟ್ರೇಲಿಯವನ್ನು ಸೋಲಿಸಿದವರಿಗೆ ವಿಶ್ವಕಪ್‌’ ಎಂಬುದೇ ಟ್ಯಾಗ್‌ಲೈನ್‌ ಆಗಿದೆ.

ಮೆಗ್‌ ಲ್ಯಾನಿಂಗ್‌ ಪಡೆ ಅಜೇಯ ವಾಗಿ ಫೈನಲ್‌ಗೆ ಮುನ್ನುಗ್ಗಿ ಬಂದಿದೆ. ಭಾರತದೆದುರಿನ ಸೆಮಿಫೈನಲ್‌ನಲ್ಲಷ್ಟೇ ಚಾಂಪಿಯನ್ನರ ಆಟವಾಡಲು ವಿಫ‌ಲ ವಾಗಿತ್ತು. ಅಲ್ಲಿ ಭಾರತ ಮಾಡಿಕೊಂಡ ಎಡವಟ್ಟು ಆಸೀಸ್‌ ಅದೃಷ್ಟವನ್ನು ತೆರೆದಿರಿಸಿತ್ತು. ಕೇವಲ 5 ರನ್‌ ಅಂತ ರದ ಗೆಲುವು ಲ್ಯಾನಿಂಗ್‌ ಬಳಗದ ಫೈನಲ್‌ ಬಾಗಿಲನ್ನು ತೆರೆದಿರಿಸುವಂತೆ ಮಾಡಿತು. ಇನ್ನೊಂದು ಸೆಮಿಫೈನಲ್‌ ಕೂಡ ಇದೇ ರೀತಿ ಸಾಗಿತ್ತು. ಆದ ರಲ್ಲಿ ದ.ಆಫ್ರಿಕಾ ಘಾತಕ ಹಾಗೂ ಶಿಸ್ತಿನ ಬೌಲಿಂಗ್‌ ಮೂಲಕ ಗಮನ ಸೆಳೆಯಿತು. ಭಾರೀ ನಿರೀಕ್ಷೆ ಇರಿಸಿ ಕೊಂಡಿದ್ದ ಇಂಗ್ಲೆಂಡ್‌ ತಂಡವನ್ನು 6 ರನ್ನುಗಳಿಂದ ಕಟ್ಟಿಹಾಕಿತು.

ಆಸೀಸ್‌ ಫೈನಲ್‌ ಜೋಶ್‌
ಬಲಾಬಲದ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯವೇ ಒಂದು ಕೈ ಮೇಲು. ಬಲಿಷ್ಠ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಸರದಿಯನ್ನು ಹೊಂದಿರುವ ಆಸೀಸ್‌ ಪಡೆ ಫೈನಲ್‌ ಅವಕಾಶವನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಕಾಂಗರೂಗಳ ಫೈನಲ್‌ ಜೋಶ್‌ ಸಾಟಿಯಿಲ್ಲದ್ದು. ಬ್ಯಾಟಿಂಗ್‌ನಲ್ಲಿ ಎಲ್ಲಿಸ್‌ ಪೆರ್ರಿ, ಬೆತ್‌ ಮೂನಿ, ಮೆಗ್‌ ಲ್ಯಾನಿಂಗ್‌, ಆ್ಯಶ್ಲಿ ಗಾರ್ಡನರ್‌, ಟಹ್ಲಿಯಾ ಮೆಕ್‌ಗ್ರಾತ್‌; ಬೌಲಿಂಗ್‌ನಲ್ಲಿ ಮೆಗಾನ್‌ ಶಟ್‌, ಡಾರ್ಸಿ ಬ್ರೌನ್‌ ಹೆಚ್ಚು ಅಪಾಯಕಾರಿಗಳು. ಇವರಲ್ಲಿ ಆಲ್‌ರೌಂಡರ್‌ಗಳೂ ಬಹಳಷ್ಟು ಮಂದಿ ಇದ್ದಾರೆ.

Advertisement

ಲೀಗ್‌ ಹಂತದಲ್ಲಿ ಆಸೀಸ್‌ ಪಡೆ ದಕ್ಷಿಣ ಆಫ್ರಿಕಾವನ್ನೂ ಮಣಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಅಲ್ಲಿ ಆತಿಥೇಯ ತಂಡ ಗಳಿಸಿದ್ದು 6ಕ್ಕೆ 124 ರನ್‌ ಮಾತ್ರ. ಆಸ್ಟ್ರೇಲಿಯ 16.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತ್ತು. ಇದು ಆಸೀಸ್‌ ಆತ್ಮವಿಶ್ವಾಸವನ್ನು ಖಂಡಿತ ಹೆಚ್ಚಿಸಲಿದೆ. ದಕ್ಷಿಣ ಆಫ್ರಿಕಾ ಇದಕ್ಕೆ ಸೇಡು ತೀರಿಸಿಕೊಳ್ಳುವ ಯೋಜನೆಯನ್ನು ರೂಪಿಸಬೇಕಿದೆ.

ಸರ್ವಾಂಗೀಣ ಪ್ರದರ್ಶನ
ಲೀಗ್‌ ಹಂತದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯ ವಿರುದ್ಧ ಎಡವಿಯೂ ಫೈನಲ್‌ ತನಕ ಬಂದದ್ದು ದಕ್ಷಿಣ ಆಫ್ರಿಕಾದ ಸಾಹಸಗಾಥೆಗೆ ಸಾಕ್ಷಿ. ಅದರಲ್ಲೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡನ್ನು ಬಗ್ಗುಬಡಿದ ರೀತಿಯಂತೂ ಅಮೋಘ. ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಇದೊಂದು ಅತ್ಯುತ್ತಮ ನಿದರ್ಶವಾಗಿತ್ತು. ಆತಿಥೇಯ ತಂಡ ಇದೇ ಮಟ್ಟವನ್ನು ಉಳಿಸಿಕೊಂಡರೆ ಆಸ್ಟ್ರೇಲಿಯಕ್ಕೆ ಖಂಡಿತವಾಗಿಯೂ ಅಪಾಯವಿದೆ.

ಲಾರಾ ವೋಲ್ವಾರ್ಟ್‌-ಟಾಜ್ಮಿನ್‌ ಬ್ರಿಟ್ಸ್‌ ಈ ಕೂಟದ ಅತ್ಯುತ್ತಮ ಆರಂಭಿಕ ಜೋಡಿ. ಇಬ್ಬರೂ ಟಾಪ್‌ ಫಾರ್ಮ್ನಲ್ಲಿದ್ದಾರೆ. ಹಾಗೆಯೇ ಬೌಲಿಂಗ್‌ನಲ್ಲಿ ಶಬಿ°ಮ್‌ ಇಸ್ಮಾಯಿಲ್‌-ಅಯಬೊಂಗಾ ಖಾಕಾ ಜೋಡಿಯೂ ಭರ್ಜರಿ ಲಯದಲ್ಲಿದೆ. ಇವರಿಬ್ಬರು ಸೇರಿಕೊಂಡು ಆಂಗ್ಲರ ಬ್ಯಾಟಿಂಗ್‌ ಸರದಿಯನ್ನು ಸೀಳಿದ ಪರಿ ಪ್ರಶಂಸನೀಯ. ಆಲೌರೌಂಡರ್‌ ಮರಿಜಾನ್‌ ಕಾಪ್‌, ನಾಯಕಿ ಸುನೆ ಲುಸ್‌ ಮತ್ತಿಬ್ಬರು ಪ್ರಮುಖ ಆಟಗಾರ್ತಿಯರು.

ಫೈನಲ್‌ ವೇಳೆ ಸಂಪೂರ್ಣ ವೀಕ್ಷಕ ವರ್ಗ ದಕ್ಷಿಣ ಆಫ್ರಿಕಾದ ಬೆಂಬಲಕ್ಕೆ ನಿಲ್ಲಲಿದೆ. ಆದರೆ ಇದೇ ಮೊದಲ ಸಲ ಫೈನಲ್‌ ಆಡುತ್ತಿರುವುದರಿಂದ ತಂಡದ ಮೇಲೆ ಅಷ್ಟೇ ಒತ್ತಡವೂ ಇದೆ. ಗೆದ್ದರೆ ಇತಿಹಾಸ. ಮೊದಲ ಸಲ ಐಸಿಸಿ ಪ್ರಶಸ್ತಿಯೊಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಶೋಕೇಸ್‌ಗೆ ಕಲಶಪ್ರಾಯವಾಗಲಿದೆ.

ಫೈನಲ್‌ಗೆ ಭಾರತದ ರೆಫ್ರಿ
ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್‌ ಫೈನಲ್‌ಗೆ ಐಸಿಸಿ ತೀರ್ಪುಗಾರರ ಯಾದಿಯನ್ನು ಪ್ರಕಟಿಸಿದೆ. ಮ್ಯಾಚ್‌ ರೆಫ್ರಿಯಾಗಿ ಭಾರತದ ಜಿ.ಎಸ್‌. ಲಕ್ಷ್ಮೀ ಆಯ್ಕೆಯಾಗಿದ್ದಾರೆ.

ಫೀಲ್ಡ್‌ ಅಂಪಾಯರ್‌ಗಳಾಗಿ ಜಾಕ್ವೆಲಿನ್‌ ವಿಲಿಯಮ್ಸ್‌ ಮತ್ತು ಕಿಮ್‌ ಕಾಟನ್‌; ಟಿವಿ ಅಂಪಾಯರ್‌ ಆಗಿ ಸುಜಾನೆ ರೆಡ್‌ಫ‌ರ್ನ್ ಅವರನ್ನು ನೇಮಿಸಲಾಗಿದೆ.

ವಿಶ್ವಕಪ್‌ ಸ್ವಾರಸ್ಯ
-ಆಸ್ಟ್ರೇಲಿಯ ಚೊಚ್ಚಲ ವಿಶ್ವಕಪ್‌ ಹೊರತುಪಡಿಸಿ ಉಳಿದ ಆರೂ ಪಂದ್ಯಾವಳಿಗಳಲ್ಲಿ ಫೈನಲ್‌ ತಲುಪಿದೆ.
-ದಕ್ಷಿಣ ಆಫ್ರಿಕಾ ಮೊದಲ ಸಲ ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಹಾಕಿದೆ.
-ಅತೀ ಹೆಚ್ಚು 5 ಸಲ ವಿಶ್ವಕಪ್‌ ಗೆದ್ದ ದಾಖಲೆ ಆಸ್ಟ್ರೇಲಿಯದ್ದಾಗಿದೆ.
-ಈ ಸಲವೂ ಚಾಂಪಿಯನ್‌ ಆದರೆ ಕಾಂಗರೂ ಪಡೆ 2 ಸಲ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದಂತಾಗುತ್ತದೆ. ಇದಕ್ಕೂ ಮೊದಲು 2010, 2012 ಮತ್ತು 2014ರಲ್ಲಿ ಸತತ 3 ಸಲ ವಿಶ್ವಕಪ್‌ ಎತ್ತಿತ್ತು. ಕಳೆದೆರಡು ಕೂಟಗಳಲ್ಲಿ ಆಸ್ಟ್ರೇಲಿಯವೇ ಗೆದ್ದು ಬಂದಿತ್ತು.
-6 ಫೈನಲ್‌ಗ‌ಳಲ್ಲಿ ಆಸ್ಟ್ರೇಲಿಯ ಒಮ್ಮೆ ಮಾತ್ರ ಸೋತಿದೆ. ಅದು 2016ರ ಕೋಲ್ಕತಾ ಮುಖಾಮುಖೀ. ಇಲ್ಲಿ ವೆಸ್ಟ್‌ ಇಂಡೀಸ್‌ ಚಾಂಪಿಯನ್‌ ಆಗಿ ಮೂಡಿಬಂದಿತ್ತು.
-ಆಸ್ಟ್ರೇಲಿಯ ಹೊರತುಪಡಿಸಿ ವಿಶ್ವಕಪ್‌ ಎತ್ತಿದ ಉಳಿದೆರಡು ತಂಡಗಳೆಂದರೆ ಇಂಗ್ಲೆಂಡ್‌ (2009) ಮತ್ತ ವೆಸ್ಟ್‌ ಇಂಡೀಸ್‌ (2016).
-ಫೈನಲ್‌ ತಲುಪಿಯೂ ಈವರೆಗೆ ಪ್ರಶಸ್ತಿ ಗೆಲ್ಲಲು ವಿಫ‌ಲವಾದ ತಂಡಗಳೆಂದರೆ ನ್ಯೂಜಿಲ್ಯಾಂಡ್‌ (2 ಸಲ) ಮತ್ತು ಭಾರತ (2020).
-ಈವರೆಗೆ ಆತಿಥೇಯ ತಂಡ ಫೈನಲ್‌ನಲ್ಲಿ ಸೋತ ನಿದರ್ಶನವಿಲ್ಲ. 2009ರಲ್ಲಿ ಇಂಗ್ಲೆಂಡ್‌ (ಲಂಡನ್‌) ಮತ್ತು 2020ರಲ್ಲಿ ಆಸ್ಟ್ರೇಲಿಯ (ಮೆಲ್ಬರ್ನ್) ಚಾಂಪಿಯನ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next