ಕೇಪ್ ಟೌನ್: ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ರವಿವಾರ ತೆರೆ ಬೀಳಲಿದೆ. ಸಹಜ ವಾಗಿಯೇ ಕೂಟದ ಶ್ರೇಷ್ಠ ಆಟಗಾರ್ತಿ ಯಾರು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದು. ಐಸಿಸಿ ಕಿರಿದುಗೊಳಿಸಿರುವ 9 ಮಂದಿ ಕ್ರಿಕೆಟಿಗರ ಯಾದಿಯಲ್ಲಿ ಭಾರತದ ಯುವ ಕೀಪರ್ ಹಾಗೂ ಡ್ಯಾಶಿಂಗ್ ಬ್ಯಾಟರ್ ರಿಚಾ ಘೋಷ್ ಕೂಡ ಇದ್ದಾರೆಂಬುದು ಖುಷಿಯ ಸಂಗತಿ.
68ರ ಸರಾಸರಿಯಲ್ಲಿ 168 ರನ್ ಗಳಿಸಿದ ಸಾಧನೆ ರಿಚಾ ಅವರದು. 5 ಇನ್ನಿಂಗ್ಸ್ ಗಳಲ್ಲಿ ಅವರು 2 ಸಲವಷ್ಟೇ ಔಟ್ ಆಗಿದ್ದಾರೆ. 2 ಸಲ 40 ರನ್ ಗಡಿ ದಾಟಿದ್ದಾರೆ. ಕೀಪಿಂಗ್ ಸಾಧನೆಯೂ ಮೇಲ್ಮಟ್ಟದಲ್ಲಿತ್ತು.
ಯಾದಿಯಲ್ಲಿ ಆಸ್ಟ್ರೇಲಿಯದ ಅತ್ಯಧಿಕ ಮೂವರು ಕ್ರಿಕೆಟಿಗರಿ ದ್ದಾರೆ- ನಾಯಕಿ ಮೆಗ್ ಲ್ಯಾನಿಂಗ್ (138 ರನ್), ಕೀಪರ್-ಓಪನರ್ ಅಲಿಸ್ಸಾ ಹೀಲಿ (171 ರನ್) ಮತ್ತು ಆಲ್‌ರೌಂಡರ್ ಆ್ಯಶ್ಲಿ ಗಾರ್ಡನರ್ (81 ರನ್, 9 ವಿಕೆಟ್). ಇವರೆಲ್ಲರಿಗೂ ಫೈನಲ್‌ನಲ್ಲಿ ತಮ್ಮ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶವಿದೆ.
ಇಂಗ್ಲೆಂಡ್‌ನ ಆಲ್‌ರೌಂಡರ್ ನಥಾಲಿ ಸ್ಕಿವರ್ (216 ರನ್) ಮತ್ತು ಸ್ಪಿನ್ನರ್ ಸೋಫಿ ಎಕ್ ಸ್ಟೋನ್ (11 ವಿಕೆಟ್) ನೆಚ್ಚಿನ ಆಟಗಾರ್ತಿಯ ರಾಗಿದ್ದಾರೆ. ದಕ್ಷಿಣ ಆಫ್ರಿಕಾವನ್ನು ಫೈನಲ್‌ಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಲಾರಾ ವೋಲ್ವಾರ್ಟ್ ಮತ್ತು ಟಾಜ್ಮಿನ್ ಬ್ರಿಟ್ಸ್, ವೆಸ್ಟ್ ಇಂಡೀಸ್ ನಾಯಕಿ ಹ್ಯಾಲಿ ಮ್ಯಾಥ್ಯೂಸ್ ಉಳಿದ ಆಟಗಾರ್ತಿಯರು.